ಗಡ್ಡಪ್ಪ, ಸೆಂಚುರಿ ಗೌಡ್ರು ಮತ್ತು ಅಭಿ ಈ ಹೆಸರುಗಳನ್ನು ಕೇಳಿದ್ರೆ ಯಾರಿಗಾದ್ರೂ ತಿಥಿ ಸಿನಿಮಾ ನೆನಪಿಗೆ ಬರುತ್ತೆ. ತಿಥಿ ಅನ್ನೋ ವಿಭಿನ್ನ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದಿದ್ದ ತ್ರಿಮೂರ್ತಿಗಳ ಕಾಂಬಿನೇಷನ್ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈ ಬಾರಿ ಗಡ್ಡಪ್ಪನ ಸರ್ಕಲ್ ನಿರ್ಮಿಸಿಕೊಂಡು ಮೂವರು ಮತ್ತೆ ಕನ್ನಡಿಗರ ಮುಂದೆ ಬರ್ತಿದ್ದಾರೆ.

ಕಾಮಿಡಿ ಮೂಲಕ ರಂಜಿಸಲು ಗಡ್ಡಪ್ಪನ ಸರ್ಕಲ್ ಸಿನಿಮಾ ತಂಡ ಇದೇ ಫೆಬ್ರವರಿ 7ಕ್ಕೆ ತೆರೆಗೆ ಬರಲು ತಯಾರಾಗಿ ನಿಂತಿದೆ.

ಬಿ.ಆರ್.ಕೇಶವ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾಕ್ಕೆ ತುಳಸಿರಾಮ್ ಬಂಡವಾಳ ಹೂಡಿದ್ದಾರೆ. ಕಚಗುಳಿಯಿಡೋ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ರಸದೌತಣ ನೀಡುವ ಭರವಸೆ ಹುಟ್ಟಿಸಿದೆ. ಚಿತ್ರದಲ್ಲಿ ಗಡ್ಡಪ್ಪ ಮತ್ತು ಸೆಂಚುರಿ ಗೌಡ್ರು ಡಾನ್ ಪಾತ್ರದಲ್ಲಿ ಮಿಂಚಿದ್ದಾರೆ. ಗಡ್ಡಪ್ಪ ಸರ್ಕಲ್ ಮೂಲಕ ಹೊಸತನದ ಫೀಲ್ ಕೊಡುವ ಪ್ರಯತ್ನ ಮಾಡಿದ್ದಾರೆ

ಗಡ್ಡಪ್ಪ, ಸೆಂಚುರಿ ಗೌಡ್ರು ಮತ್ತು ಅಭಿ ಅವರ ಜೊತೆಗೆ ಸುಕನ್ಯ, ತುಳಸಿರಾಮ್, ಕನ್ನಡಿಗ ಯೋಗಿ, ವಿಶ್ವಾಸ್, ರಾಮ್, ಸಂತು ಹೀಗೆ ಸಾಕಷ್ಟು ಮಂದಿ ಕಲಾವಿದರು ಅಭಿನಯಿಸಿದ್ದು ಮನೋರಂಜನೆಯ ಮಹದೂಟ ಉಣಬಡಿಸಲು ಸಿದ್ಧವಾಗಿದೆ. ಚಿತ್ರಕ್ಕೆ ನಯನ್ ಅವರ ಸಂಗೀತವಿದ್ದು, ಶೇಷಗಿರಿ ಸಂಭಾಷಣೆ ಬರೆದು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಪ್ರಮೋದ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿದ್ದು, ಸಿದ್ಧರಾಜು ಚಿತ್ರದಲ್ಲಿ ಸೀನ್ ಗಳಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಗಡ್ಡಪ್ಪನ ಸರ್ಕಲ್ ಹೇಗಿದೆ ಅನ್ನೋದಕ್ಕೆ ಫೆಬ್ರವರಿ 7ರ ವರೆಗೆ ಕಾಯಲೇ ಬೇಕು.