ಬ್ರಹ್ಮಾವರ : ನದಿಗೆ ನೀರು ತರಲು ತೆರಳಿದ್ದ ವೇಳೆಯಲ್ಲಿ ಮಹಿಳೆಯೋರ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೂರಾಲಿನಲ್ಲಿ ನಡೆದಿದೆ.
ಸೂರಾಲಿನ ಸೊಳ್ಳೆಕಟ್ಟು ಕಂಬಳಗದ್ದೆ ನಿವಾಸಿ ಚಂದು ಮರಕಾಲ್ತಿ ( 60 ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಮನೆ ಸಮೀಪದಲ್ಲಿರುವ ಹೊಳೆಗೆ ನೀರು ತರೋದಕ್ಕೆ ಮಹಿಳೆ ಹೋಗಿದ್ದಾರೆ. ಈ ವೇಳೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಚಂದು ಮರಕಾಲ್ತಿ ಅವರು ಮುಳುಗುತ್ತಿರೋದನ್ನು ರಾಜೇಶ್ ಎಂಬವರು ಗಮನಿಸಿದ್ದಾರೆ.
ಕೂಡಲೇ ನದಿಯಿಂದ ಅವರನ್ನು ರಕ್ಷಿಸಿ, ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ, ಚಂದು ಮರಕಾಲ್ತಿ ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.