ಮಂಗಳೂರು/ಉಡುಪಿ : ಕರಾವಳಿ ಜಿಲ್ಲೆಗಳಲ್ಲೀಗ ಕೊರೊನಾ ಎರಡನೇ ಅಲೆಯ ಆರ್ಭಟ ಶುರುವಾಗಿದೆ. ಇದೀಗ ಒಂದೇ ದಿನ ಎರಡೂ ಜಿಲ್ಲೆಗಳಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ ಶತಕದ ಗಡಿದಾಟಿದ್ದು, ಆತಂಕವನ್ನು ಮೂಡಿಸಿದೆ.

ಕೊರೊನಾ ವೈರಸ್ ಸೋಂಕು ಮೊದಲ ಅಲೆ ಸಾಕಷ್ಟು ಪ್ರಾಣ ಹಾನಿಯನ್ನುಂಟು ಮಾಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರೋಬ್ಬರಿ 739 ಮಂದಿಯನ್ನು ಬಲಿಪಡೆದಿದ್ದರೆ, ಉಡುಪಿ ಜಿಲ್ಲೆಯಲ್ಲಿ 190 ಮಂದಿ ಸಾವನ್ನಪ್ಪಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕು ಇದೀಗ ಎರಡನೇ ಅಲೆಯ ರೂಪದಲ್ಲಿ ಕರಾವಳಿ ಭಾಗಗಳಲ್ಲಿ ಕಾಣಿಸಿಕೊಂಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ 72 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 34,935ಕ್ಕೆ ಏರಿಕೆಯಾಗಿದೆ. ಅಲ್ಲದೇ 378 ಸಕ್ರೀಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇನ್ನು ಉಡುಪಿ ಜಿಲ್ಲೆಯಲ್ಲಿ 42 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಒಟ್ಟು ಸಂಖ್ಯೆ 23,928ಕ್ಕೆ ಏರಿಕೆಯಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಒಟ್ಟು 133 ಸಕ್ರೀಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದೀಗ ಮಾಸ್ಕ್, ಸಾಮಾಜಿಕ ಅಂತರ, ಹೊರ ರಾಜ್ಯ ಪ್ರಮಾಣಿಕರಿಗೆ ಕೊರೊನಾ ತಪಾಸಣೆ ಸೇರಿದಂತೆ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಆದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದ್ರೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯೂ ಇದೆ.