ಮಣಿಪಾಲ : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಣಿಪಾಲದಲ್ಲಿರುವ ಎಂಟು ಅಂತಸ್ತಿನ ಕಟ್ಟಡವೊಂದು ಕುಸಿಯುವ ಭೀತಿಯಲ್ಲಿದ್ದು, ಕಟ್ಟಡದಲ್ಲಿರುವ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಎಂಟು ಅಂತಸ್ತಿನ ಕಟ್ಟಡದ ತಡೆಗೋಡೆ ಕುಸಿಯುತ್ತಿದ್ದು ಕಟ್ಟಡ ಕುಸಿಯುವ ಭೀತಿಯಲ್ಲಿದೆ. ಈಗಾಗಲೇ ಸ್ಥಳಕ್ಕೆ ಎಸಿ, ಪೌರಾಯುಕ್ತ, ತಹಶಿಲ್ದಾರ್, ಜಿ.ಪಂ ಅಧ್ಯಕ್ಷರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೇ ಅಧಿಕಾರಿಗಳು ಭೇಟಿಕೊಟ್ಟು ಕಟ್ಟದಲ್ಲಿರುವ ಜನರನ್ನು ಸ್ಥಳಾಂತರಿಸಲಾಗಿದ್ದು, ಕಟ್ಟಡ ತಳಭಾಗದಲ್ಲಿರುವ ಅಂಗಡಿಗಳನ್ನು ಮುಚ್ಚಲಾಗಿದೆ.

ಬಹುಮಹಡಿ ಕಟ್ಟಡ ತಡೆಗೋಡೆ ಕುಸಿದ ಪರಿಣಾಮವಾಗಿ ಮುಂಜಾಗ್ರತಾ ಕ್ರಮವಾಗಿ ಉಡುಪಿಯಿಂದ ಮಣಿಪಾಲಕ್ಕೆ ಬರುವ ವಾಹನ ಸಂಚಾರದ ರಸ್ತೆಯನ್ನು ಬಂದ್ ಮಾಡಲಾಗಿದ್ದು ಇನ್ನೊಂದು ಬದಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

