ಬೆಂಗಳೂರು : Heavy Rain School Holiday : ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅದ್ರಲ್ಲೂ ಆರಿದ್ರಾ ಮಳೆಯಿಂದಾಗಿ ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಚುರುಕಾಗಿದೆ. ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಮೂರು ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಆಯಾಯ ಜಿಲ್ಲಾಡಳಿತ ರಜೆ ಘೋಷಿಸಿವೆ.
ಕಳೆದ ಮೂರ್ನಾಲ್ಕು ದಿನಗಳಿಂದಲೂ ಕರಾವಳಿ ಜಿಲ್ಲೆಗಳಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಇಂದೂ ಕೂಡ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ನಿನ್ನೆ ರಾತ್ರಿಯೂ ಕೂಡ ಕರಾವಳಿಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ಉಂಟಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.
ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದೆ. ಬ್ರಹ್ಮಾವರ, ಕಾಪು, ಬೈಂದೂರು, ಕಾರ್ಕಳದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದೆ. ಬಹುತೇಕ ಪ್ರದೇಶಗಳಲ್ಲಿ ಇದೀಗ ಕೃತಕ ನೆರೆಯ ಭೀತಿ ಎದುರಾಗಿದೆ. ಇಂದೂ ಕೂಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಕೂರ್ಮರಾವ್ ಅವರು ಆದೇಶ ಹೊರಡಿಸಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಜುಲೈ 4 ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಮೂಲ್ಕಿ, ಮೂಡಬಿದಿರೆ, ಬಂಟ್ವಾಳ ತಾಲೂಕುಗಳ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ ಮಂಗಳವಾರವೂ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಜುಲೈ 5 ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿರಲಿದೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಜಾರಿ ಮಾಡಿದೆ. ಜೊತೆಗೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿನ ಅಂಗನವಾಡಿ, ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಇಂದು ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಲಿನ್ ಅವರು ಅವರು ಆದೇಶ ಹೊರಡಿಸಿದ್ದಾರೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಪ್ರವಾಸಿಗರು ಕೂಡ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿಯೇ ಇದ್ದು, ವಿಪತ್ತು ನಿರ್ವಹವಣೆಯ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : Udupi School Holiday: ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ