ಮಂಗಳೂರು : ಮಲೈಕಾ ಸೊಸೈಟಿಯ ಹೆಸರಲ್ಲಿ ಅಧಿಕ ಬಡ್ಡಿಯ ಆಸೆ ತೋರಿಸಿ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಹಣ ಠೇವಣಿ ಸಂಗ್ರಹಿಸಿ ಅವಧಿ ಮುಗಿದರೂ ಹಣ ಹಿಂದಿರುಗಿಸದ ಆರೋಪ ಕೇಳಿಬಂದಿದ್ದು, ಈ ಕುರಿತು ಮಾದಕದ್ರವ್ಯ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಂಗಳೂರು, ಉಡುಪಿ ಮಾತ್ರವಲ್ಲದೇ ಮುಂಬೈನ ಹಲವೆಡೆಗಳಲ್ಲಿ ಮಲೈಕಾ ಮಲ್ಟಿ ಸ್ಟೇಟ್ ಕೋ ಅಪರೇಟಿವ್ ಸೊಸೈಟಿ ತನ್ನ ಶಾಖೆಯನ್ನು ಹೊಂದಿದ್ದು, ಹಿರಿಯ ನಾಗರಿಕರಿಗೆ ವಿಶೇಷ ಬಡ್ಡಿ ನೀಡುವ ಆಮಿಷವೊಡ್ಡಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಮಾಡಲಾಗಿದೆ.
ಆದರೆ ಅವಧಿ ಮುಗಿದ ಮೇಲೆಯೂ ಗ್ರಾಹಕರಿಗೆ ಹಣವನ್ನು ವಾಪಾಸ್ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲೀಗ 100ಕ್ಕೂ ಅಧಿಕ ಮಂದಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮಲೈಕಾ ಹೆಸರಲ್ಲಿ ಮಂಗಳೂರು ನಗರ, ತೊಕ್ಕೊಟ್ಟು, ಬಂಟ್ವಾಳ, ಪುತ್ತೂರು, ಸುಳ್ಯ, ವಿಟ್ಲ, ಮೂಡುಬಿದಿರೆ ಮೊದಲಾದ ಕಡೆ ಮಲೈಕಾ ಎಲೆಕ್ಟ್ರಾನಿಕ್ಸ್ ಮಳಿಗೆಗಳಿವೆ. ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ ಸೊಸೈಟಿಯ ಪ್ರಧಾನ ಕಚೇರಿಯನ್ನು ಹೊಂದಿದೆ.
ಜಿಲ್ಲೆಯಲ್ಲಿ 800ಕ್ಕೂ ಅಧಿಕ ಗ್ರಾಹಕರನ್ನು ಹೊಂದಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಒಟ್ಟು ಎಷ್ಟು ಮಂದಿಗೆ ಎಷ್ಟು ಮೊತ್ತ ವಂಚನೆಯಾಗಿದೆ ಎಂಬುದು ಪತ್ತೆ ಮಾಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.