ಮಂಗಳೂರು : ಇಂಟರ್ನ್‌ಶಿಪ್ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ವಿರುದ್ದ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಕಾಲೇಜಿನ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆನ್ನುವ ಆರೋಪ ಕೇಳಿಬಂದಿತ್ತು. ಅಲ್ಲದೇ ಯುವತಿ ಹಾಗೂ ವಕೀಲರ ನಡುವೆ ನಡೆದಿದೆ ಎನ್ನಲಾಗುತ್ತಿರುವ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಎಬಿವಿಪಿ ಪ್ರಕರಣ ದಾಖಲಿಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಮಾಡಿಕೊಂಡಿತ್ತು.
ಇದೀಗ ಸಂತ್ರಸ್ತ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಮಂಗಳೂರಿನ ಮಹಿಳಾ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ ಕಚೇರಿ ಹೊಂದಿದ್ದ ವಕೀಲ ರಾಜೇಶ್ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಕಚೇರಿಗೆ ವಿದ್ಯಾರ್ಥಿನಿ ಇಂಟರ್ನ್‌ಶಿಪ್ ಮಾಡಲು ಬರುತ್ತಿದ್ದಳು ಎನ್ನಲಾಗುತ್ತಿದೆ. ಆಡಿಯೋದಲ್ಲಿ ತಾನು ತಪ್ಪು ಮಾಡಿದ್ದೇನೆ ಕ್ಷಮಿಸಿ ಬಿಡು. ನನ್ನ ಜೀವನದಲ್ಲಿ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನೀನು ಮೊದಲಿನಂತೆಯೇ ಕಚೇರಿಗೆ ಬಾ. ಸಂಜೆ ಆರು ಗಂಟೆಯ ನಂತರ ಕಚೇರಿಯಲ್ಲಿ ಇರುವುದು ಬೇಡಾ ಎಂದು ಮನವಿ ಮಾಡಿರುವ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿಯೇ ಎಬಿವಿಪಿ ಕಾರ್ಯಕರ್ತರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಇದೀಗ ವಕೀಲ ರಾಜೇಶ್ ಭಟ್ ವಿರುದ್ಧ ಯುವತಿ ನೀಡಿರುವ ದೂರಿನ ಆಧಾರದಲ್ಲಿ, ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್ 354(A), 354(B), 354(C), 376, 511ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ವಾಮಾಚಾರದ ಹೆಸರಲ್ಲಿ ದಂಪತಿಗೆ 4.41 ಕೋಟಿ !
ಇದನ್ನೂ ಓದಿ : ಲಕ್ನೋ- ಮುಂಬೈ ಪುಷ್ಪಕ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ
( Sexual harassment of an internship student: FIR against a reputed lawyer )