ಮಂಗಳೂರು : ಕೊರೊನಾ ಕಾಟದಿಂದಾಗಿ ಶೈಕ್ಷಣಿಕ ಚಟುವಟಿಕೆಗೆ ತೊಡಕಾಗುತ್ತಿದೆ. ಕೊರೊನಾ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಪ್ಟೆಂಬರ್ 1ರಿಂದ ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾರ್ಗಸೂಚಿ ಹೊರಡಿಸಿದ್ದಾರೆ.
ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ದೈಹಿಕ ತರಗತಿಗಳು ಸೆಪ್ಟೆಂಬರ್ 1 ರಿಂದ ಆರಂಭವಾಗಲಿದ್ದು, ಪ್ರಥಮ ಪಿಯು, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು ಕ್ರಮವಾಗಿ ಪಿಯು ಉಪ ನಿರ್ದೇಶಕರು ಮತ್ತು ಕಾಲೇಜುಗಳ ಜಂಟಿ ನಿರ್ದೇಶಕರ ಅನುಮೋದನೆ ಪಡೆದ ನಂತರ ಸೆಪ್ಟೆಂಬರ್ 15 ರ ನಂತರ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.
ತರಗತಿಗಳು ನಡೆಯುತ್ತಿರುವಾಗ ಕಾಲೇಜಿನ ಪ್ರಾಂಶುಪಾಲರು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಡಿಸಿ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ. ಪ್ರಮುಖವಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಿಸಲು ಕಾಲೇಜುಗಳಲ್ಲಿ ಪ್ರತ್ಯೇಕ ಕರೋನಾ ಆರೈಕೆ ಕೇಂದ್ರ ತೆರೆಯಬೇಕು. ತಮ್ಮ ಸಂಪರ್ಕ ತಡೆಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು negative RTPCR ವರದಿಯನ್ನು ತಂದ ನಂತರ ತರಗತಿಗಳಿಗೆ ಹಾಜರಾಗಬಹುದು. ಕ್ವಾರಂಟೈನ್‌ನಲ್ಲಿರುವ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ವ್ಯವಸ್ಥೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಪದವಿಪೂರ್ವ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೊರೊನಾ ನೆಗೆಟಿವ್ (negative RT-PCR) ಪರೀಕ್ಷಾ ಪ್ರಮಾಣಪತ್ರಗಳನ್ನು ಒದಗಿಸಬೇಕು. ಸ್ಥಳೀಯ ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸಬೇಕು. ಕೇರಳದಿಂದ ಆಗಮಿಸುವ ವಿದ್ಯಾರ್ಥಿಗಳು ಪ್ರತಿ ಏಳು ದಿನಗಳಿಗೊಮ್ಮೆ ಕೊರೊನಾ ನೆಗೆಟಿವ್ (RT-PCR) ಪರೀಕ್ಷಾ ವರದಿಯನ್ನು ನೀಡುವ ಮೂಲಕ ತರಗತಿಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ.
ಕೇರಳದಿಂದ ಆಗಮಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿದ್ದರೂ ಒಂದೇ ನಿಯಮವನ್ನು ಪಾಲಿಸಬೇಕು. ಎಸ್‌ಒಪಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಡಿಡಿಪಿಯು, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಇವಿಷ್ಟು ಮಾರ್ಗಸೂಚಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.