ವಿಟ್ಲ : ನಿರಂತರವಾಗಿ ಸಾರ್ವಜನಿಕರ ಕೆಲಸ ಮಾರ್ಯಗಳನ್ನು ಮಾಡಿಕೊಡಲು ಸತಾಯಿಸುತ್ತಿದ್ದಾರೆನ್ನುವ ಆರೋಪ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳಯಲ್ಲಿ ಕಚೇರಿಗೆ ತಡವಾಗಿ ಬಂದ ವಿಟ್ಲದ ಸಬ್ ರಿಜಿಸ್ಟ್ರಾರ್ ಕಚೇರಿಯ ಅಧಿಕಾರಿಗಳನ್ನು ಶಾಸಕ ಮಠಂದೂರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಟ್ಲದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಿಧ ದಾಖಲೆಗಳನ್ನು ನೋಂದಣಿ ಮಾಡಿಕೊಳ್ಳಲು ಜನರು ಪ್ರತಿನಿತ್ಯ ಗಂಟೆಗಟ್ಟಲೇ ಕಾಯುತ್ತಿದ್ದು, ನೋದಣಾಧಿಕಾರಿ ತಡವಾಗಿ ಕಚೇರಿಗೆ ಹಾಜರಾಗುತ್ತಿರುವ ಬಗ್ಗೆ ಸಾರ್ವಜನಿಕರು ಪುತ್ತೂರು ಶಾಸಕರಿಗೆ ದೂರು ನೀಡಿದ್ದರು. ಈ ಬಗ್ಗೆ ಶಾಸಕರು ಬೆಳಗ್ಗೆಯೇ ಕಚೇರಿಗೆ ಬಂದಿದ್ದರು. ಆದರೆ ಅಧಿಕಾರಿಗಳು ಮಾತ್ರ 11 ಗಂಟೆಯಾದರೂ ಬರಲಿಲ್ಲ. ಇದರಿಂದಾಗಿ ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಾಯುತ್ತಿದ್ದರು. ನಂತರದ ಅಧಿಕಾರಿಗಳು ಕಚೇರಿಗೆ ಬರುತ್ತಿದ್ದಂತೆಯೇ ಶಾಸಕ ಮಠಂದೂರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿನಿಂದಲೂ ನನಗೆ ದೂರುಗಳು ಬರುತ್ತಿದೆ. ಬೆಳಗ್ಗೆ 11 ಗಂಟೆಗೆ ಕೆಲಸಕ್ಕೆ ಹಾಜರಾಗುತ್ತಿದ್ದೀರಿ. ಜನರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ಗಂಟೆಗಟ್ಟಲೆ ಕಾಯಬೇಕು. ಇದನ್ನು ಪ್ರಶ್ನಿಸಿದ್ರೆ ಜನರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದೀರೆಂಬ ದೂರುಗಳು ಕೇಳಿಬರುತ್ತಿವೆ. ಜನರಷ್ಟೇ ಅಲ್ಲಾ ನಾನು ಕೂಡ ಹೊರಗಡೆ ನಿಂತುಕೊಂಡಿದ್ದೇನೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉಪನೋಂದಣಾಧಿಕಾರಿ ಪ್ರೇಮ ಅವರು, ಕಚೇರಿಯಲ್ಲಿ ಸಿಬ್ಬಂದಿಗಳ ಕೊರೆತೆಯ ಜೊತೆಗೆ ಸರ್ವರ್ ಸಮಸ್ಯೆಯಿದೆ. ಇನ್ನು ಕಂಪ್ಯೂಟರ್ ಕೂಡ ಕೈ ಕೊಡುತ್ತಿದೆ. ಈ ಸಮಸ್ಯೆಯಿಂದ ಕೆಲಸಕಾರ್ಯ ತಡವಾಗುತ್ತದೆ. ಆದರೆ ನಾನು ಸಮಯಕ್ಕೆ ಸರಿಯಾಗಿ ಕರ್ತವ್ಯ ಹಾಜರಾಗುತ್ತಿದ್ದೇನೆ. ಟೋಕನ್ ನೀಡಿದ ಎಲ್ಲರ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಶಾಸಕರು ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸುವ ಜವಾಬ್ದಾರಿ ನಿಮ್ಮದಾಗಿದೆ. ತಮ್ಮ ಕೆಲಸಕಾರ್ಯಗಳಿಗೆ ಬರುವ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಅವರೊಂದಿಗೆ ಸೌಜನ್ಯ ದಿಂದ ವರ್ತಿಸಬೇಕು ಎಂದು ಹೇಳಿದ ಅವರು ಬಳಿಕ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭ ಪುತ್ತೂರು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಗುಳಿ ಮನೆ, ವಿಟ್ಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ ವಿಟ್ಲ, ಕಾರ್ಯದರ್ಶಿ ಕರುಣಾಕರ ನಾಯ್ತೋಟ್ಟು, ಮುಖಂಡರಾದ ರಾಮ್‌ದಾಸ್ ಶೆಣೈ, ನವೀನ್ ಪಡ್ನೂರು, ರಾಜೇಶ್ ಅನ್ನಮೂಲೆ, ಉದಯ ಆಲಂಗಾರು ಮೊದಲಾದವರು ಉಪಸ್ಥಿತರಿದ್ದರು.