ಕಾರ್ಕಳ : ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿರುವ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ದಿ ಅಧಿಕಾರಿ (Mundkur PDO) ರವಿರಾಜ. ಎಚ್. ರವರ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಕೋರಿ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ (CM Basavaraj Bommai) ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ ಪಿಡಿಒ ರವಿರಾಜ್ ಎಚ್. ಅವರನ್ನು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಅಮಾನತಿನ ಹಿಂದೆ ರಾಜಕೀಯ ಶಕ್ತಿಯ ಕೈವಾಡವಿದೆ ಅನ್ನೋ ಆರೋಪ ಕೇಳಿಬಂದಿತ್ತು. ಅಲ್ಲದೇ ಪಂಚಾಯತ್ ರಾಜ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಉಡುಪಿ ಜಿಲ್ಲಾ ಘಟಕ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಅಮಾನತು ಆದೇಶವನ್ನು ಹಿಂಪಡೆಯುವಂತೆ ಕೋರಿ ಮನವಿಯನ್ನು ಸಲ್ಲಿಸಿತ್ತು.
ಇದೀಗ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರವನ್ನು ಬರೆದಿದ್ದು, ಪತ್ರದಲ್ಲಿ ಪಿಡಿಒ ರವಿರಾಜ. ಎಚ್. ರವರು ಪ್ರಾಮಾಣಿಕ ಹಾಗು ಕ್ರೀಯಾಶೀಲ ಅಧಿಕಾರಿಯಾಗಿದ್ದರೂ ರಾಜಕೀಯ ಕಾರಣದಿಂದಾಗಿ ಕರ್ತವ್ಯಲೋಪದ ಆರೋಪದಡಿ ಅಮಾನತ್ತು ಮಾಡಿರುವುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ ದವರು ದೂರಿರುತ್ತಾರೆ. ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಗ್ರಾಮ ಪಂಚಾಯತಿಯ ಎಲ್ಲಾ ಹಂತದ ಸಿಬ್ಬಂದಿಯೊಂದಿಗೆ, ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವ ಬಗ್ಗೆ ಈಗಾಗಲೇ ಪತ್ರದ ಮೂಲಕ ತಿಳಿಸಿರುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು 165 ಗ್ರಾಮ ಪಂಚಾಯತ್‌ಗಳಿದ್ದು, ಒಂದು ವೇಳೆ ಸರಿಯಾದ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ, ಮುಷ್ಕರದಿಂದಾಗಿ ಏಕಕಾಲದಲ್ಲಿ ಎಲ್ಲಾ ಗ್ರಾಮ ಪಂಚಾಯತ್‌ಗಳ ಕಾರ್ಯ ಚಟುವಟಿಕೆಗಳು ಸ್ಥಬ್ದವಾದಲ್ಲಿ ಗ್ರಾಮೀಣ ಜನರಿಗೆ ತೀವ್ರ ತೊಂದರೆಯಾಗಲಿದೆ. ಆದ್ದರಿಂದ ರವಿರಾಜ. ಎಚ್. ಅವರ ಅಮಾನತು ಆದೇಶ ಹಿಂಪಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕಾಗಿ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : 40% ಕಮೀಷನ್ ಪ್ರಕರಣ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೊರೆ ಹೋದ ಗುತ್ತಿಗೆದಾರರ ಸಂಘ
ಇದನ್ನೂ ಓದಿ : ದೇವೇಗೌಡರ ಮೊಮ್ಮಕ್ಕಳ ಬಳಿಕ ಸೊಸೆ ಸರದಿ : ವಿಧಾನಸಭಾ ಎಲೆಕ್ಷನ್ ಗೆ ಭವಾನಿ ರೇವಣ್ಣ
Mundkur PDO suspension case, MLC Manjunath Bhandary Letter To CM Basavaraj Bommai