ಕುಂದಾಪುರ : ಆತ ಪ್ರತಿಭಾನ್ವಿತ ವಿದ್ಯಾರ್ಥಿ. ಬಡತನದಲ್ಲಿಯೇ ಬೆಳೆದಿದ್ದ ಆತ ಕಾಲೇಜು ಶಿಕ್ಷಣದ ಜೊತೆಗೆ ಸಂಸಾರಕ್ಕೂ ಆಸರೆಯಾಗಿದ್ದ. ಆದ್ರೆ ಅಪಘಾತದಲ್ಲಿ ಆತ ಸಾವನ್ನಪ್ಪಿದ್ದಾನೆ. ಇದೀಗ ಮಗನನ್ನು ಕಳೆದುಕೊಂಡ ಬಡಕುಟುಂಬಕ್ಕೆ ನಾಡೋಜಾ ಡಾ.ಜಿ.ಶಂಕರ್ ಆಸರೆಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಂದಾವರ ನೀರಜ್ (ಮಂಜ) ಬಸ್ರೂರಿನ ಶಾರದಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ಪದವಿ ಪಡೆಯುತ್ತಿದ್ದ.ಪ್ರತಿಭಾನ್ವಿತ ವಾಲಿಬಾಲ್ ಆಟಗಾರನಾಗಿದ್ದ ನೀರಜ್ ಹೈಸ್ಕೂಲು ಶಿಕ್ಷಣವನ್ನು ಪಡೆಯುವಾಗಲೇ ಅತ್ಯುತ್ತಮ ಅಟ್ಯಾಕಿಂಗ್ ಆಟದಿಂದ ಶಾಲೆಗೆ ಪ್ರಶಸ್ತಿಯನ್ನು ತಂದುಕೊಟ್ಟಿದ್ದ. ಕಾಲೇಜು ಮಟ್ಟದಲ್ಲಿಯೂ ಅನೇಕ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾನೆ. ಅಲ್ಲದೇ ಮಂಗಳೂರು ವಿಶ್ವ ವಿದ್ಯಾಲಯದ ವಾಲಿಬಾಲ್ ತಂಡಕ್ಕೂ ಆಯ್ಕೆಯಾಗಿದ್ದ. ಒಂದೊಮ್ಮೆ ನೀರಜ್ ಬದುಕಿದ್ದರೆ ರಾಷ್ಟ್ರಮಟ್ಟದಲ್ಲಿ ಮಿಂಚುವ ಎಲ್ಲಾ ಅರ್ಹತೆಯನ್ನೂ ಹೊಂದಿದ್ದ. ಆದರೆ ವಿಧಿ ಆತನ ಬದುಕಲ್ಲಿ ಚೆಲ್ಲಾಟವಾಡಿದೆ. ತಾಯಿ, ತಂಗಿಗೆ ಆಸರೆಯಾಗಿದ್ದ ನೀರಜ್ ಕಾಲೇಜಿನ ರಜೆಯ ದಿನಗಳಲ್ಲಿಯೂ ಒಂದಿಲ್ಲೊಂದು ಕೆಲಸದ ಮೂಲಕ ದುಡಿಮೆ ಮಾಡುತ್ತಿದ್ದ. ಆವತ್ತು ತರಕಾರಿ ತುಂಬಿಸಿಕೊಂಡು ಬರುವುದಕ್ಕೆ ಅಂತಾ ಮುಂಜಾನೆ ತನ್ನ ಗೆಳೆಯನ ಜೊತೆಗೆ ಟೆಂಪೋದಲ್ಲಿ ಉಡುಪಿ ಕಡೆಗೆ ತೆರಳುತ್ತಿದ್ದ, ಈ ವೇಳೆಯಲ್ಲಿ ಸಂತೆಕಟ್ಟೆಯ ಬಳಿಯಲ್ಲಿ ನಡೆದ ಅಪಘಾತದಲ್ಲಿ ಧೀರಜ್ ಸಾವನ್ನಪ್ಪಿದ್ದಾನೆ.

ಇದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ನಾಡೋಜಾ ಜಿ.ಶಂಕರ್ ಮೃತರ ನೆರವಿಗೆ ಬಂದಿದ್ದಾರೆ. ಕೂಡಲೇ ಮೃತರ ಕುಟುಂಬಕ್ಕೆ 25 ಸಾವಿರ ರೂಪಾಯಿ ಹಣವನ್ನು ಮೊಗವೀರ ಯುವ ಸಂಘಟನೆಯ ಮೂಲಕ ತಲುಪಿಸುವ ಮೃತರ ಕುಟುಂಬಕ್ಕೆ ನೈತಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಮಾಡಿದ್ದರು. ಇದೀಗ ಮತ್ತೆ 1 ಲಕ್ಷ ರೂಪಾಯಿಯನ್ನು ಮೃತ ನೀರಜ್ ತಾಯಿಗೆ ನೀಡುವ ಮೂಲಕ ಬಡಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದಾರೆ.

ಮೃತ ನೀರಜ್ ತಂಗಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಅಣ್ಣನ ಸಾವಿನ ನೋವಿನಲ್ಲಿದ್ದ ಆಕೆಗೆ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಬರೆಯುವಂತೆಯೂ ಜಿ.ಶಂಕರ್ ಪ್ರೇರೆಪಿಸಿದ್ದರು. ಕುಟುಂಬಕ್ಕೆ ಧೈರ್ಯವನ್ನು ತುಂಬಿದ್ದು ನೀರಜ್ ಸಹೋದರಿಯ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ತಾವೇ ವಹಿಸಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.

ನಾಡೋಜಾ ಡಾ.ಜಿ.ಶಂಕರ್ ಅವರು ನೀಡಿದ ಒಂದು ಲಕ್ಷ ರೂಪಾಯಿ ಚೆಕ್ ನ್ನು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೋಟ ಅವರು ಹಸ್ತಾಂತರಿಸಿದ್ದಾರೆ. ಮೊಗವೀರ ಯುವ ಸಂಘಟನೆಯ ಮುಖಂಡರಾದ ಸದಾನಂದ ಬಳ್ಕೂರು. ಸತೀಶ. ಎಂ ನಾಯ್ಕ . ಜಗದೀಶ್ ಮಾರ್ಕೊಡು. ಕುಂದಾಪುರ ಘಟಕದ ಅಧ್ಯಕ್ಷ ಗಣೇಶ್ ಮೆಂಡನ್ ಮುಂತಾದವರು ಉಪಸ್ಥಿತರಿದ್ದರು.