ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿನ ಬಜಿಲಪಾದೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿಯೇ ಹುಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಳೆದ ಕೆಲ ದಿನಗಳಿಂದಲೂ ಬಜಿಪಾದೆ ಪ್ರದೇಶದಲ್ಲಿ ಹಲವು ಬಾರಿ ಹುಲಿ ಗ್ರಾಮಸ್ಥರಿಗೆ ಕಾಣಿಸಿಕೊಂಡಿದೆ. ವೇಣೂರು – ನಾರಾವಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಹುಲಿ ಕಾಣಿಸಿಕೊಂಡಿದ್ದು, ನಂತರ ಪೊದೆಯೊಳಗೆ ಸಾಗಿದೆ ಎಂದು ಪ್ರತ್ಯಕ್ಷದರ್ಶಿ ರವಿ ಪೂಜಾರಿ ಅವರು ತಿಳಿಸಿದ್ದಾರೆ.

ಬಜಿಲಪಾದೆಯ ಸುತ್ತಮುತ್ತ ಎರಡು ವಾರಗಳ ಅಂತರದಲ್ಲಿ ನಾನು ಮೂರು ಬಾರಿ ಹುಲಿಯನ್ನು ನೋಡಿದ್ದೇನೆ. ವಾರದ ಹಿಂದೆ ಗೂಡಂಗಡಿಯೊಂದರ ಹತ್ತಿರ ಕಾಣಿಸಿಕೊಂಡಿತ್ತು ಎಂದು ಮತ್ತೊಬ್ಬರು ಪ್ರತ್ಯಕ್ಷದರ್ಶಿ ಪ್ರಭಾಕರ ಪೂಜಾರಿ ಹೇಳಿದ್ದಾರೆ.

ಗ್ರಾಮದಲ್ಲಿ ಆತಂಕ: ಗ್ರಾಮದಲ್ಲಿ ಕೆಲವು ನಾಯಿಗಳು ನಾಪತ್ತೆಯಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆಯವರು ತಕ್ಷಣ ಹುಲಿಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.