ಉಡುಪಿ : ಎರಡು ವರ್ಷದ ಮಗುವಿನ ಅಪರಣ ಪ್ರಕರಣ ಸುಖಾಂತ್ಯ ಕಂಡಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಸಕ್ಸಸ್ ಆಗಿದೆ. 12 ಗಂಟೆಯೊಳಗೆ ಮಗುವನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾಗಿರುವ ಅರುಣ್ ಹಾಗೂ ಭಾರತಿ ದಂಪತಿಗಳ ಎರಡೂ ವರ್ಷ ನಾಲ್ಕು ತಿಂಗಳ ಮಗುವನ್ನು ಬಾಗಲಕೋಟೆಯ ಪರಶು ಎಂಬಾತ ಚಹಾ ಕುಡಿಸುವುದಾಗಿ ಹೇಳಿ ಮಗುವಿನೊಂದಿಗೆ ನಾಪತ್ತೆಯಾಗಿದ್ದ. ಪೊಲೀಸರಿಗೆ ಮಾಹಿತಿ ತಿಳಿಯುತ್ತಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಮಗುವನ್ನು ಅಪಹರಿಸಿದ್ದ ಪರಶು ಉಡುಪಿಯ ಕರಾವಳಿ ಬೈಪಾಸ್ ಬಳಿಯಲ್ಲಿ ಮಗುವಿನೊಂದಿಗೆ ಬಸ್ ಏರಿರೋದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಸ್ ಚಾಲಕರನ್ನು ವಿಚಾರಿಸಿದಾಗ ಸಂತೆಕಟ್ಟೆಯಲ್ಲಿ ಇಳಿದು ಉತ್ತರ ಕನ್ನಡ ಬಸ್ ಏರಿ ಹೋಗಿದ್ದಾನೆ ಅಂತಾ ಮಾಹಿತಿ ನೀಡಿದ್ದಾರೆ. ಕೂಡಲೇ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಮಾಹಿತಿಯನ್ನು ರವಾನಿಸಲಾಗಿತ್ತು. ಭಟ್ಕಳದಲ್ಲಿ ಬಸ್ ಇಳಿದ ಪರಶು ರೈಲಿನಲ್ಲಿ ಕುಮಟಾಕ್ಕೆ ತೆರಳಿದ್ದಾನೆ.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯ ಮೂಲಕ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಕುಮಟಾದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 12 ಗಂಟೆಗಳ ಅವಧಿಯಲ್ಲಿ ಮಗುವನ್ನು ಪತ್ತೆ ಹಚ್ಚಿರುವ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.