ಮಂಗಳವಾರ, ಏಪ್ರಿಲ್ 29, 2025
HomeCoastal NewsKota Lathi Charge Case Updates : ಮೆಹಂದಿ ಮನೆಯಲ್ಲಿ ಪೊಲೀಸ್‌ ದೌರ್ಜನ್ಯ ಪ್ರಕರಣ :...

Kota Lathi Charge Case Updates : ಮೆಹಂದಿ ಮನೆಯಲ್ಲಿ ಪೊಲೀಸ್‌ ದೌರ್ಜನ್ಯ ಪ್ರಕರಣ : PSI ಸಂತೋಷ್‌ ಸೇರಿ ಐವರು ಠಾಣೆಯಿಂದ ಶಿಫ್ಟ್‌ : ಎಸ್‌ಪಿ ವಿಷ್ಣುವರ್ಧನ್‌ ಆದೇಶ

- Advertisement -

ಕೋಟ : ಮೆಹಂದಿ ನಡೆಯುತ್ತಿದ್ದ ವೇಳೆಯಲ್ಲಿ ಕೊರಗ ಸಮುದಾಯದ ಮನೆಗೆ ನುಗ್ಗಿ ಲಾಠಿಚಾರ್ಜ್‌ ನಡೆಸಿ ದೌರ್ಜನ್ಯವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಠಿಚಾರ್ಜ್‌ ನಡೆಸಿರುವ (Kota Lathi Charge Case Updates) ಆರೋಪದ ಹಿನ್ನೆಲೆಯಲ್ಲಿ ಕೋಟ ಠಾಣೆಯ ಪಿಎಸ್‌ಐ ಸಂತೋಷ್‌ ಹಾಗೂ ಐವರು ಸಿಬ್ಬಂದಿಗಳನ್ನು ಠಾಣೆಯಿಂದ ಶಿಫ್ಟ್‌ ಮಾಡಿ ಉಡುಪಿ ಎಸ್‌.ಪಿ. ವಿಷ್ಣುವರ್ಧನ್‌ ಅವರು ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೋಟ ದೌರ್ಜನ್ಯ ಪ್ರಕರಣದ ಕುರಿತು ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ಬುಧವಾರ ಸಂಜೆಯ ಒಳಗಾಗಿ ಪೂರ್ಣ ಗೊಳ್ಳುವ ನಿರೀಕ್ಷೆಯಿದೆ. ವಿಚಾರಣೆ ಮುಗಿಯುವರೆಗೆ ಪಿಎಸ್‌ಐ ಸಂತೋಷ್‌ ಹಾಗೂ ಆರೋಪ ಹೊತ್ತಿರುವ ಸಿಬ್ಬಂದಿಗಳನ್ನು ಠಾಣೆಯಿಂದ ಶಿಫ್ಟ್‌ ಮಾಡಲಾಗಿದೆ. ಹೀಗಾಗಿ ಅವರು ಕೋಟ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಆದೇಶಿಸಿದ್ದಾರೆ. ಮೆಹಂದಿ ಮನೆಯಲ್ಲಿ ಲೌಡ್‌ ಸ್ಪೀಕರ್‌ ಅವಧಿ 10ಗಂಟೆ ಮೀರಿದ ನಂತರವೂ ನಡೆಯುತ್ತಿತ್ತು. ಹೀಗಾಗಿ ಸ್ಥಳೀರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಎಚ್‌ಓ ಅವರು ಸ್ಥಳಕ್ಕೆ ಭೇಟಿ ನೀಡಿ ಸೌಂಡ್‌ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಮತ್ತೆ 112 ಗೆ ದೂರು ಬಂದ ಹಿನ್ನಲೆಯಲ್ಲಿ ಪಿಎಸ್ಐ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ. ಘಟನೆ ನಿಜವಾಗಿದ್ದರೆ ಖಂಡಿತಾವಾಗಿಯೂ ಕ್ರಮಕೈಗೊಳ್ಳುತ್ತೇವೆ. ಇಲಾಖೆಯ ಬಗ್ಗೆ ನಂಬಿಕೆ ಇರಲಿ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುತ್ತೇನೆ ಎಂದು ವಿಷ್ಣುವರ್ಧನ್‌ ಅವರು ತಿಳಿಸಿದ್ದಾರೆ.

ಕೊರಗ ಕುಟುಂಬದ ಮೇಲೆ ಹಲ್ಲೆ ಪೊಲೀಸರ ಮೇಲೆ ಕ್ರಮಕ್ಕೆ: ಸಚಿವ ಕೋಟ ಸೂಚನೆ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕಾಲೋನಿಯಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭವೊಂದಕ್ಕೆ ಏಕಾಏಕಿ ದಾಳಿ ಮಾಡಿದ ಪೊಲೀಸರು, ಮದುಮಗನ ಸಹಿತ ಅಮಾಯಕ ಕೊರಗರ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಬಲವಾಗಿ ಖಂಡಿಸಿದ್ದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸದ್ರಿ ಕುಟುಂಬಗಳು ನನಗೆ ಪರಿಚಯವಿದ್ದು, ಅಲ್ಲಿರುವ 9ಕ್ಕೂ ಹೆಚ್ಚು ಕುಟುಂಬದವರು ಅಮಾಯಕರಾಗಿದ್ದು, ಅವರ ಮೇಲೆ ವಿನಾಕಾರಣ ದೌರ್ಜನ್ಯ ಎಸಗಿರುವ ಪೊಲೀಸರ ಮೇಲೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ.

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಶ್ಚಿಮ ವಲಯ ಐಜಿಪಿ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು ಇಂತಹ ಚಟುವಟಿಕೆಗಳನ್ನು ಸರಕಾರ ಸಹಿಸುವುದಿಲ್ಲ. ಈಗಾಗಲೇ ಮಾನ್ಯ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ಪೋಲಿಸರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಹೇಳಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಪಾರ್ಟಿಯ ರಾಜ್ಯ ಕಾರ್ಯಕಾರಣಿಯಲ್ಲಿ ತಾನು ಭಾಗವಹಿಸಿದ್ದು, ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಜೊತೆ ಮಾತನಾಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಸಂತ್ರಸ್ತ ಕೊರಗ ಜನಾಂಗಕ್ಕೆ ನ್ಯಾಯ ಒದಗಿಸುವಲ್ಲಿ ಮತ್ತು ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ವಿಚಾರದಲ್ಲಿ ಯಾವುದೇ ಆತಂಕ ಬೇಡ. ನಾಳೆ ಸದ್ರಿ ಕೊರಗರ ಜನಾಂಗದ ಕೇರಿಗೆ ತಾನು ಭೇಟಿ ನೀಡಲಿದ್ದು, ನೊಂದ ಕುಟುಂಬದ ಜೊತೆ ಚರ್ಚಿಸುವುದಾಗಿ ಸಚಿವ ಕೋಟ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋಟ ಪಿಎಸ್‌ಐ ಸಂತೋಷ್‌ ವಿರುದ್ದಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಜಿಲ್ಲಾ ಬಿಜೆಪಿ ಒತ್ತಾಯ

ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟ ಕೊರಗ ಸಮುದಾಯದ ಮದುವೆ ಮನೆಗೆ ಮೆಹಂದಿ ಸಂದರ್ಭದಲ್ಲಿ ನುಗ್ಗಿ ಮದುಮಗನೂ ಸೇರಿದಂತೆ ಹಲವರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಅಮಾನವೀಯ ಕ್ರಮವನ್ನು ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಮೆಹಂದಿ ಕಾರ್ಯಕ್ರಮದಲ್ಲಿ ಡಿ.ಜೆ. ಹಾಕಿರುವ ನೆಪವೊಡ್ಡಿ ಆಕ್ಷೇಪ ವ್ಯಕ್ತಪಡಿಸಿ ಅನಗತ್ಯ ಲಾಠಿ ಚಾರ್ಜ್ ಮಾಡಿರುವ ಪೊಲೀಸರು ಮತ್ತು ಕರ್ತವ್ಯದಲ್ಲಿದ್ದ ಸಬ್ ಇನ್ಸ್ಪೆಕ್ಟರ್ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಸಚಿವರನ್ನು ಒತ್ತಾಯಿಸುವುದಾಗಿ ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://youtu.be/ezvaxRW3w4s

ಪೊಲೀಸರ ಗುಂಡಾಗಿರಿ ಖಂಡನೀಯ : ಅಶೋಕ್ ಕುಮಾರ್ ಕೊಡವೂರು

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ಗ್ರಾಮದಲ್ಲಿ ಕೊರಗ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ ರಾಜೇಶ್ ಎನ್ನುವವರ ಮದುವೆ (ಮೆಹಂದಿ) ಸಂಭ್ರಮದಲ್ಲಿ ಡಿ.ಜೆ ಹಾಕಿದ್ದರು ಎನ್ನುವ ಕಾರಣಕ್ಕೆ ಕೋಟ ಪೊಲೀಸರು ಮನೆಗೆ ನುಗ್ಗಿ ಮದುಮಗನನ್ನು ಸೇರಿಸಿ ಸೇರಿದ ಎಲ್ಲರನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯ. ರಾಜೇಶ್ MSW ಪದವೀಧರರಾಗಿದ್ದು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯಲ್ಲಿ D group ನೌಕರಾಗಿ ಕಾರ್ಯನಿರ್ವಹಿಸುತ್ತಾ ಜವಾಬ್ದಾರಿಯತ ಸ್ಥಾನದಲ್ಲಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಮದುವೆಗಳಲ್ಲಿ DJ ಸಂಭ್ರಮ ಸರ್ವೇ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರ ಮೇಲೆ ನೈತಿಕ ಗೂಂಡಾಗಿರಿ ನಡೆಸಿರುವುದು ನಿಜಕ್ಕೂ ಇಡೀ ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆˌ ಈ ಕೃತ್ಯ ಎಸಗಿದ್ದ ಠಾಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸರಕಾರವನ್ನು ಆಗ್ರಹಿಸಿದ್ದಾರೆ.

Kota Lathi Charge Case : ದೌರ್ಜನ್ಯಕ್ಕೆ ಒಳಗಾದ ಮನೆಗೆ ಎಪಿಸಿಆರ್ ನಿಯೋಗ ಭೇಟಿ

ಕೊರಗ ಸಮುದಾಯದ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ನುಗ್ಗಿ ಲಾಠಿಚಾರ್ಜ್ ಮಾಡಿ ದೌರ್ಜನ್ಯವೆಸಗಿದ ಮನೆಗೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಇದರ ಜಿಲ್ಲಾ ನಿಯೋಗ ಭೇಟಿ ನೀಡಿತು. ನಿಯೋಗವು ಲಾಠಿಚಾರ್ಜ್ ದೌರ್ಜನ್ಯಗೊಳಗಾದ ಸಂತ್ರಸ್ಥರ ಬಳಿ ಘಟನೆಯ ವಿವರಣೆಯನ್ನು ಪಡೆದುಕೊಂಡಿತು. ಘಟನೆಯಲ್ಲಿ ಮದುಮಗ ಸೇರಿದಂತೆ ವೃದ್ದರು ಮಹಿಳೆಯರು, ಮಕ್ಕಳು ಗಾಯಗೊಂಡಿರುವುದು ಗಮನಕ್ಕೆ ಬಂದಿದೆ. ಪೊಲೀಸರ ದೌರ್ಜನ್ಯದ ಸಾಕ್ಷ್ಯ ದಾಖಲೀಕರಣ ಮಾಡಿ ರಾಜ್ಯ ಮಾನವ ಹಕ್ಕು ಆಯೋಗ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದಾಗಿ ಈ ಸಂದರ್ಭದಲ್ಲಿ ತಿಳಿಸಲಾಯಿತು. ಹಾಗೂ ದೌರ್ಜನ್ಯಕ್ಕೊಳಗಾಗದ ಕುಟುಂಬಕ್ಕೆ ಪರಿಹಾರ ನೀಡಲು ಸರಕಾರವನ್ನು ಆಗ್ರಹಿಸಿದೆ. ಈ ಸಂದರ್ಭದಲ್ಲಿ ನಿಯೋಗದಲ್ಲಿ ಹಸನ್ ಮಾವಡ್, ಇದ್ರಿಸ್ ಹೂಡೆ, ಸಾಲಿಡಾರಿಟಿಯ ಯಾಸೀನ್ ಕೋಡಿಬೆಂಗ್ರೆ ಮತ್ತು ಇಬ್ರಾಹಿಮ್ ಸಯೀದ್ ಉಪಸ್ಥಿತರಿದ್ದರು

https://www.youtube.com/watch?v=OzLGYy1AZMg

ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್ ಖಂಡನೀಯ : ಸಾಲಿಡಾರಿಟಿ ಉಡುಪಿ

ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್ ಆರೋಪ ಕೇಳಿಬಂದಿತು ಈ ಕೂಡಲೇ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾ ಸಂಚಾಲಕ ಯಾಸೀನ್ ಕೋಡಿಬೆಂಗ್ರೆ ಆಗ್ರಹಿಸಿದ್ದಾರೆ. ಕೋಟ ತಟ್ಟುವಿನ ಕೊರಗ ಕಾಲೋನಿಯದ ಚಿಟ್ಟು ಬೆಟ್ಟುವಿನಲ್ಲಿ‌ ಮದುವೆಯ ಮುನ್ನ ದಿನವಾದ ಸೋಮವಾರ ರಾತ್ರಿ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿರುವಾಗ ಪೊಲೀಸರು ಏಕಾಏಕಿ ನುಗ್ಗಿ ಲಾಠಿಚಾರ್ಜ್ ನಡೆಸಿದ ಆರೋಪ ಇದೆ. ದುರ್ಬಲ ಸಮುದಾಯದ ವಿರುದ್ಧದ ಈ ರೀತಿಯ ವರ್ತನೆಯನ್ನು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ. ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಗಳು ಸೇರಿ ಈ ರೀತಿಯ ವರ್ತನೆ ಮಾಡಿರುವ ಕುರಿತು ಆರೋಪ ಕೇಳಿ ಬಂದಿದೆ. ಅದರೊಂದಿಗೆ ಕೊರಗ ಸಮುದಾಯದ ನಾಯಕ ಗಣೇಶ್ ಅವರಿಗೂ ತೀವ್ರವಾಗಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಈ ಕುರಿತು ಕೂಡಲೇ ಸರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಆಗ್ರಹಿಸುತ್ತದೆ.‌

ಇದನ್ನೂ ಓದಿ : Mehndi Ceremony Lathi charge : ಮೆಹಂದಿ ಮನೆಗೆ ನುಗ್ಗಿ ಕೋಟ ಪೊಲೀಸರ ದೌರ್ಜನ್ಯ : ಮದುಮಗ, ಮಹಿಳೆಯರ ಮೇಲೆ ಲಾಠಿ ಪ್ರಹಾರ

ಇದನ್ನೂ ಓದಿ : Booster Dose For 60+: 60 ವರ್ಷ ಮೇಲ್ಪಟ್ಟವರ ಬೂಸ್ಟರ್​ ಡೋಸ್​ಗೆ ಬೇಕಿಲ್ಲ ವೈದ್ಯರ ಶಿಫಾರಸ್ಸು..!

( Kota Lathi Charge Case Updates : psi and 5 police staff transferred to sp office, mehndi case dysp leadership investigation )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular