ಉಡುಪಿ : ತಾನು ಕರ್ನಾಟಕ ಬ್ಯಾಂಕ್ ಉದ್ಯೋಗಿಯಾಗಿದ್ದು, ಬಡವರಿಗೆ ಬ್ಯಾಂಕಿನ ವತಿಯಿಂದ 17 ಸಾವಿರ ರೂಪಾಯಿ ಹಣವನ್ನು ನೀಡುತ್ತಾರೆಂದು ನಂಬಿಸಿ ವೃದ್ದ ಮಹಿಳೆಯ ಬಳಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮುದರಂಗಡಿ ಹಲಸಿನಕಟ್ಟೆಯ ನಿವಾಸಿಯಾಗಿರುವ ಸರೋಜಾ ( 63 ವರ್ಷ) ಎಂಬವರೇ ವಂಚನೆಗೆ ಒಳಗಾದ ಮಹಿಳೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಸರೋಜಾ ಅವರು ಉಡುಪಿಯ ಕಲ್ಪನಾ ಚಿತ್ರ ಮಂದಿರದ ಸಮೀಪದಲ್ಲಿರುವ ಕ್ಲಿನಿಕ್ ಗೆ ಬಂದಿದ್ದರು. ಈ ವೇಳೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ವೃದ್ದೆಗೆ ತಾನು ಬ್ಯಾಂಕ್ ಉದ್ಯೋಗಿಯಾಗಿದ್ದು, ರಾಮಣ್ಣ ಭಂಡಾರಿ ಅವರ ಮಗ ರಾಜೇಶ್ ಎನ್ನುವುದಾಗಿ ಪರಿಚಯ ಮಾಡಿಕೊಂಡಿದ್ದಾನೆ.

ನಮ್ಮ ಬ್ಯಾಂಕಿನಿಂದ ಬಡವರಿಗೆ ಹಣ ನೀಡುತ್ತಾರೆಂದು ನಂಬಿಸಿ, ವೃದ್ದೆಗೆ ಉತ್ತಮ ಚಿಕಿತ್ಸೆಯನ್ನು ಕೊಡಿಸುವುದಾಗಿ ಹೇಳಿ ಕ್ಲಿನಿಕ್ ನಿಂದ ಮಿತ್ರ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೃದ್ದೆಯ ಬಳಿಯಲ್ಲಿರುವ ಚಿನ್ನವನ್ನು ನೋಡಿದ ವ್ಯಕ್ತಿಯ ಚಿನ್ನಾಭರಣಗಳನ್ನು ಹಾಕಿಕೊಂಡಿದ್ರೆ ಹಣ ನೀಡುವುದಿಲ್ಲ ಎಂದು ಸುಳ್ಳು ಹೇಳಿದ್ದ. ಆತನ ಮಾತು ನಂಬಿದ ವೃದ್ದೆ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಚೀಲಕ್ಕೆ ಹಾಕಿಕೊಂಡಿದ್ದಾರೆ.

ವೃದ್ದ ಮಹಿಳೆಯನ್ನು ಆಸ್ಪತ್ರೆಯಲ್ಲಿ ಕೂರಿಸಿ ಅಲ್ಲಿಂದ ತೆರಳಿದ ವ್ಯಕ್ತಿ ಹಲವು ಸಮಯದ ವರೆಗೂ ಬಾರದೇ ಇದ್ದಾಗ ವೃದ್ದೆಗೆ ಸಂಶಯ ಬಂದಿತ್ತು. ತನ್ನ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣಗಳು ಇಲ್ಲದೇ ಇರುವುದರಿಂದಾಗಿ ಮಹಿಳೆ ಉಡುಪಿಯ ನಗರ ಠಾಣೆಗೆ ದೂರು ನೀಡಿದ್ದಾರೆ.