ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದಲ್ಲೇ ಮೊದಲ ಓಮೈಕ್ರಾನ್ ಸೋಂಕಿತನಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಓಮೈಕ್ರಾನ್ ಆತಂಕದಲ್ಲಿದ್ದ ಜನತೆಗೆ ಈ ಸುದ್ದಿ ಸದ್ಯ ನಿರಾಳತೆ ತಂದಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಬಸವನಗುಡಿ ಮೂಲದ 34 ವರ್ಷದ ವ್ಯಕ್ತಿಯಲ್ಲಿ ಓಮೈಕ್ರಾನ್ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಗದಿ ಪಡಿಸಿದಂತೆ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ರೋಗಿಯು ಆಸ್ಪತ್ರೆಯಿಂದ (Omicron patient discharge) ಬಿಡುಗಡೆಗೊಂಡಿದ್ದಾನೆ.
ಡಿಸೆಂಬರ್ 1 ರಂದು ದಕ್ಷಿಣ ಆಫ್ರಿಕಾದಿಂದ ವಾಪಸ್ಸಾಗಿದ್ದ ವ್ಯಕ್ತಿಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ವೇಳೆ ಕೋವಿಡ್ ಪರೀಕ್ಷೆಯಲ್ಲಿ ರಿಸಲ್ಟ್ ನೆಗೆಟಿವ್ ಬಂದಿತ್ತು. ಹೀಗಾಗಿ ವ್ಯಕ್ತಿ ನೇರವಾಗಿ ಮನೆಗೆ ತೆರಳಿದ್ದ. ಆದರೆ ಡಿಸೆಂಬರ್ 3 ರಂದು ವ್ಯಕ್ತಿಗೆ ಕೊರೋನಾ ಗುಣಲಕ್ಷಣ ಗೋಚರವಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3 ರಂದು ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ ರಿಸಲ್ಟ್ ಪಾಸಿಟಿವ್ ಬಂದಿತ್ತು. ತಕ್ಷಣ ವ್ಯಕ್ತಿಯ ಸ್ಯಾಂಪಲ್ ಸೀಕ್ವೆನ್ಸಿಂಗ್ ಗೆ ಕಳಿಸಲಾಗಿತ್ತುಡಿಸೆಂಬರ್ 12 ರಂದು ಜಿನೋಮ್ ಸೀಕ್ವೆನ್ಸ್ ರಿಪೋರ್ಟ್ ಬಂದಿದ್ದು, ವ್ಯಕ್ತಿಗೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ತಕ್ಷಣ ಆ ವ್ಯಕ್ತಿಯನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಅಲ್ಲದೇ ವ್ಯಕ್ತಿ ಯ ಪ್ರಾಥಮಿಕ ಹಾಗೂ ಸೆಕೆಂಡರಿ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಆತನ ಪತ್ನಿ ಗೆ ಕರೋನಾ ಪಾಸಿಟಿವ್ ಆಗಿತ್ತು. ಮಕ್ಕಳ ವರದಿ ನೆಗೆಟಿವ್ ಬಂದಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಿದ ಬಳಿಕ ವ್ಯಕ್ತಿಗೆ ಎರಡು ಸಲ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿದ ಬಳಿಕ ವ್ಯಕ್ತಿ ಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅಲ್ಲದೇ ಮನೆಗೆ ತೆರಳಿದ ಬಳಿಕ ವಹಿಸಬೇಕಾಗಿರುವ ಕಾಳಜಿ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಓಮೈಕ್ರಾನ್ ಪ್ರಕರಣಗಳು ಕಾಣಿಸಿಕೊಂಡ ಬಳಿಕ ಆತಂಕಗೊಂಡಿದ್ದ ಬೆಂಗಳೂರಿಗರ ಪಾಲಿಗೆ ಈ ಪ್ರಕರಣ ಸಮಾಧಾನ ತಂದಿದ್ದು ಓಮೈಕ್ರಾನ್ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೇ ಮಾರಣಾಂತಿಕವಲ್ಲ ಎಂಬ ಸಂದೇಶ ಸಮಾಜಕ್ಕೆ ಸಿಕ್ಕಿದ್ದು ಅನಗತ್ಯ ಆತಂಕ ಕೊನೆಗೊಂಡಂತಾಗಿದೆ. ಆದರೂ ಬೆಂಗಳೂರು ಏರ್ಪೋರ್ಟ್ ನಲ್ಲಿ ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಇದನ್ನೂ ಓದಿ : Google Puneeth Record : ನಿಧನದಂದೇ ಪುನೀತ್ ಬರೆದ್ರು ಹೊಸ ದಾಖಲೆ : ಗೂಗಲ್ ನಲ್ಲಿ ಅಪ್ಪು ರೆಕಾರ್ಡ್
( good news : discharge from Omicron Patient Hospital)