ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಬಳ್ಳಾರಿಗೆ ಕೊರೊನಾ ಸೋಂಕು ಬಿಗ್ ಶಾಕ್ ಕೊಟ್ಟಿದೆ. ರಾಜ್ಯದಲ್ಲಿಂದು 271 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 6516 ಕ್ಕೆ ಏರಿಕೆಯಾಗಿದೆ. ಆದರೆ ರಾಜ್ಯದಲ್ಲಿಂದು ಒಂದೇ ದಿನ 464 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಜಿಂದಾಲ್ ಕಾರ್ಖಾನೆ ಶಾಕ್ ಕೊಟ್ಟಿದೆ. ಕಾರ್ಖಾನೆಯ ಬಹುತೇಕ ಕಾರ್ಮಿಕರಿಗೆ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿಂದು ಒಂದೇ ದಿನ ಬರೋಬ್ಬರಿ 97 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 168ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕ ಎದುರಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೊರೊನಾ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿಂದು 36 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ. ಉಳಿದಂತೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಧಾನಕ್ಕೆ ಆರ್ಭಟಿಸುವುದಕ್ಕೆ ಶುರು ಮಾಡಿದಂತಿದೆ. ಇಂದು ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ. ಆದರೆ ಇಂದು ಒಂದೇ ದಿನ ಜಿಲ್ಲೆಯಲ್ಲಿ 125 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 816ಕ್ಕೆ ಏರಿಕೆಯಾಗಿದೆ. ಈ ಕಲಬುರಗಿ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಧಾರವಾಡದಲ್ಲಿಯೂ ಕೊರೊನಾ ಆರ್ಭಟ ಜೋರಾಗಿದ್ದು ಇಂದು 19 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 17 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 233ಕ್ಕೆ ಏರಿಕೆಯಾಗಿದೆ. ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 4, ಮಂಡ್ಯ 2, ಬೆಳಗಾವಿ 1, ವಿಜಯಪುರ 1 ಹಾಗೂ ಕೋಲಾರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ರಾಜ್ಯದಲ್ಲಿ ಕೊರೊನಾ ಮಹಾಮಾರಿ 7 ಮಂದಿಯನ್ನು ಬಲಿ ಪಡೆದಿದೆ. ಈ ಮೂಲಕ ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದಲೂ ಕೊರೊನಾ ಮಹಾಮಾರಿ ಬಲಿ ಪಡೆಯುತ್ತಿರುವುದು ಆತಂಕವನ್ನು ಮೂಡಿಸುತ್ತಿದೆ.