ಕೋಟ : ಓಣಂ ಆಚರಣೆಯ ನೆಪದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಇಸಿಆರ್ ಕಾಲೇಜು ವಿರುದ್ದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು ಮಾಸ್ಕ್ ಮರೆತು ಡ್ಯಾನ್ಸ್ ಮಾಡಿದ್ದರೂ ಕೂಡ ಜಿಲ್ಲಾಡಳಿತ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇನ್ನೊಂದೆಡೆ ತಹಶೀಲ್ದಾರ್ ಹಳೆಯ ವಿಡಿಯೋ ಎಂದು ವರದಿ ನೀಡಿದ್ದು, ಇದೀಗ ಹಳೆಯ ಹಾಗೂ ಹೊಸ ವಿಡಿಯೋಗಳು NEWS NEXT ಗೆ ಲಭ್ಯವಾಗಿದೆ.

2021ರ ಅಗಸ್ಟ್ 21ರಂದು ಉಡುಪಿ ಜಿಲ್ಲೆಯ ಕೋಟ ಸಮೀಪದಲ್ಲಿರುವ ಇಸಿಆರ್ ಕಾಲೇಜಿನಲ್ಲಿ ಓಣಂ ಸಂಭ್ರಮಾಚರಣೆ ನಡೆಸಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಕಾಲೇಜು ಆಡಳಿತ ಮಂಡಳಿ ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ ಅನ್ನೋದು ಬಯಲಾಗಿದೆ. ಓಣಂ ಆಚರಣೆಯ ಹೊತ್ತಲ್ಲೇ ಕಾಲೇಜು ಆವರಣದಲ್ಲಿ ಡಿಜೆ ಬಳಸಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆಯಲ್ಲಿ ಯಾರೊಬ್ಬರೂ ಕೂಡ ಮಾಸ್ಕ್, ಸಾಮಾಜಿಕ ಅಂತರವನ್ನು ಪಾಲನೆ ಮಾಡಿಲ್ಲ. ಈ ಕುರಿತು ವರದಿ ಬಿತ್ತರವಾಗುತ್ತಿದ್ದಂತೆಯೇ ಬ್ರಹ್ಮಾವರ ತಹಶೀಲ್ದಾರ್ ಕಾಲೇಜಿಗೆ ಭೇಟಿ ನೀಡಿದ್ದಾರೆ.

ತಹಶೀಲ್ದಾರ್ ಜಿಲ್ಲಾಧಿಕಾರಿಗಳಿಗೆ ಘಟನೆಯ ಕುರಿತು ವರದಿಯೊಂದನ್ನು ಸಲ್ಲಿಸಿದ್ದಾರೆ. ವರದಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅದು ಎರಡು ವರ್ಷಗಳ ಹಿಂದಿನ ವಿಡಿಯೋ ಎಂದು ಹೇಳಿದೆ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಕೊರೊನಾ ತಪಾಸಣೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ ವಿಡಿಯೋದಲ್ಲಿರುವ ಫ್ಲೆಕ್ಸ್‌ನಲ್ಲಿ 2021ರಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಿರುವ ಕುರಿತು ಸ್ಪಷ್ಟವಾಗಿ ಬರೆಯಲಾಗಿದೆ.

ದುರಂತವೆಂದ್ರೆ ಇಸಿಆರ್ ಕಾಲೇಜು ಎರಡು ವರ್ಷಗಳ ಹಿಂದೆ ಕೋಟ ಸಮೀಪದಲ್ಲಿಯೇ ಇರಲಿಲ್ಲ. ಎರಡು ವರ್ಷದ ಹಿಂದೆ (2019) ರಲ್ಲಿ ಕಾಲೇಜು ಕೋಟೇಶ್ವರದಲ್ಲಿ ಕಾರ್ಯನಿರ್ವ ಹಿಸುತ್ತಿತ್ತು. ಕಳೆದ ಶೈಕ್ಷಣಿಕ (2020-21) ವರ್ಷದಿಂದ ಕೋಟ ಸಮೀಪಕ್ಕೆ ಶಿಫ್ಟ್ ಆಗಿದೆ. ತಹಶೀಲ್ದಾರ್ ಅವರು ನೀಡಿದ ವರದಿಯಲ್ಲಿ ವಿಡಿಯೋ ಎರಡು ವರ್ಷ ಹಳೆಯದು ಎಂದು ತಿಳಿಸಿದ್ದಾರೆ. ಆದರೆ ಎರಡು ವರ್ಷದ ಹಿಂದೆ ಕೊಟೇಶ್ವರ ಕಾಲೇಜಿನಲ್ಲಿ ಓಣಂ ಆಚರಣೆ ಮಾಡಿರುವ ವಿಡಿಯೋ ಕೂಡ ಲಭ್ಯವಾಗಿದೆ.
ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಉಡುಪಿ ಜಿಲ್ಲಾಡಳಿತ ಕಳೆದ ಎರಡು ವರ್ಷಗಳಿಂದಲೂ ಉತ್ತಮವಾಗಿ ಕೊರೊನಾ ನಿರ್ವಹಣೆ ಮಾಡಿದೆ. ಖುದ್ದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೇ ವಿಶೇಷ ಮುತುವರ್ಜಿ ವಹಿಸಿದ್ದರು. ಇನ್ನೊಂದೆಡೆ ಜಿಲ್ಲೆಯ ಜನತೆ ಕೂಡ ಜನತಾ ಕರ್ಪ್ಯೂ, ವೀಕೆಂಡ್ ಲಾಕ್ ಡೌನ್ ಮಾತ್ರವಲ್ಲ ಈಗ ನಡೆಯುತ್ತಿರುವ ನೈಟ್ ಕರ್ಪ್ಯೂ ವೇಳೆಯಲ್ಲಿಯೂ ಉತ್ತಮವಾಗಿ ಸ್ಪಂಧಿಸುತ್ತಿದ್ದಾರೆ. ಆದರೆ ಕಾಲೇಜಿನಲ್ಲಿ ಓಣಂ ಆಚರಣೆಯ ಹೆಸರಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದ್ದರೂ, ಅದೊಂದು ಹಳೆಯ ವಿಡಿಯೋ ಎಂಬಂತೆ ನಿರ್ಲಕ್ಷ್ಯ ವಹಿಸಿರೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಧಾರ್ಮಿಕ ಕಾರ್ಯಕ್ರಮ, ಶುಭ ಸಮಾರಂಭ, ಮೆಹಂದಿ, ಮದುವೆ ಅಷ್ಟೇ ಯಾಕೆ ಅಂತ್ಯಸಂಸ್ಕಾರಕ್ಕೆ ಇಷ್ಟೇ ಜನ ಭಾಗಿಯಾಗಬೇಕೆಂಬ ನಿಯಮಗಳನ್ನು ಸರಕಾರ ಜಾರಿಗೆ ತಂದಿದ್ದು, ಜಿಲ್ಲಾಡಳಿತ ಮಾರ್ಗಸೂಚಿಯನ್ನು ಪಾಲನೆ ಮಾಡುವಂತೆ ಕಟ್ಟಪ್ಪಣೆ ಹೊರಡಿಸಿದೆ. ಆದರೆ ಈ ನಿಯಮ ಜನಸಾಮಾನ್ಯರಿಗೆ ಮಾತ್ರವೇ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಜಿಲ್ಲಾಡಳಿತ, ಕಾಲೇಜಿನಲ್ಲಿ ಮಾಸ್ಕ್ ಧರಿಸದೇ ಡ್ಯಾನ್ಸ್ ಮಾಡಿದವರ ವಿರುದ್ದ ಯಾವ ಕ್ರಮಕೈಗೊಂಡಿದೆ. ಕಾಲೇಜು ಆರಂಭದ ಹೊತ್ತಲ್ಲಿ ವಿಶೇಷ ಮಾರ್ಗಸೂಚಿ ಹೊರಡಿಸಿರುವ ಸರಕಾರ ಅದರ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆಯೇ. ಕೊರೊನಾ ಸಂಕಷ್ಟದ ನಡುವಲ್ಲೇ ಪೋಷಕರು ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಆದರೆ ಕಾಲೇಜುಗಳೇ ಇದೀಗ ಕೊರೊನಾ ಹಾಟ್‌ಸ್ಪಾಟ್ ಆದ್ರೆ ಮುಂದೇನು ಅನ್ನೋ ಭೀತಿ ಎದುರಾಗಿದೆ. ಕಾಲೇಜಿನಲ್ಲಿ ಹೇಗಿತ್ತು ಡ್ಯಾನ್ಸ್ ನೀವೇ ನೋಡಿ.
ಉಡುಪಿ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿಸೋದಕ್ಕೆ ಪಣತೊಟ್ಟಿರುವ ಜಿಲ್ಲಾಧಿಕಾರಿಗಳು ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿದವರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಕಾಲೇಜಿನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ದರೂ ಕೂಡ ಯಾವುದೇ ಕ್ರಮಕೈಗೊಳ್ಳದ ಸರಕಾರದ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಜ್ವರ, ಶೀತ, ಕೆಮ್ಮದ ಲಕ್ಷಣವಿದ್ರೆ ಕೊರೊನಾ ಟೆಸ್ಟ್ ಕಡ್ಡಾಯ : ಉಡುಪಿ ಡಿಸಿ
ಇದನ್ನೂ ಓದಿ : ಕೊರೊನಾ ಲಸಿಕೆ ಪಡೆದವರಿಗೆ ಬಿಗ್ ಶಾಕ್ : 13,768 ಮಂದಿಗೆ ಮತ್ತೆ ಸೋಂಕು