ಚಾಮರಾಜನಗರ : ರಾಜ್ಯದಲ್ಲಿಯೇ ಒಂದೇ ಒಂದು ಕೊರೊನಾ ಸೋಂಕು ಕಾಣಿಸಿಕೊಳ್ಳದೇ ಗ್ರೀನ್ ಝೋನ್ ನಲ್ಲಿದ್ದ ಚಾಮರಾಜನಗರಕ್ಕೀಗ ಮಹಾಮಾರಿ ಒಕ್ಕರಿಸಿದೆ. ಮುಂಬೈನಿಂದ ಬಂದಿದ್ದ ಯುವಕನಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಮಹಾಮಾರಿಯ ಆರ್ಭಟ ಮುಂದುವರಿದಿದೆ. ಆದ್ರೆ ಶಾಪಗ್ರಸ್ತ ಜಿಲ್ಲೆಯೆಂಬ ಹಣೆಪಟ್ಟಿಯನ್ನು ಹೊತ್ತಿರುವ ಚಾಮರಾಜನಗರದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಕೊರೊನಾ ಮಹಾಮಾರಿಯಿಂದ ತತ್ತರಿಸಿದ್ದ ತಮಿಳುನಾಡು ಹಾಗೂ ಕೇರಳ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದ್ದರೂ ಕೂಡ ಜಿಲ್ಲೆಗೆ ಸೋಂಕು ಕಾಲಿಟ್ಟಿರಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಕೈಗೊಂಡಿದ್ದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಅಷ್ಟೇ ಯಾಕೆ ಕೇಂದ್ರ ಸರಕಾರ ಕೂಡ ಜಿಲ್ಲಾಡಳಿತದ ಕಾರ್ಯಕ್ಕೂ ಶಬ್ಬಾಶ್ ಗಿರಿ ನೀಡಿತ್ತು. ಆದ್ರೀಗ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಾಲಿಮೇಡ್ ಗ್ರಾಮಕ್ಕೆ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ್ದ ಯುವಕನೋರ್ವನಿಗೆ ವೈರಸ್ ಇರುವುದು ದೃಢಪಟ್ಟಿದೆ. ಯುವಕ ನಿನ್ನೆ ತಡರಾತ್ರಿ ಸೂಳ್ವಾಡಿ ಗ್ರಾಮದಲ್ಲಿರುವ ಸೋದರ ಮಾವನ ಮನೆಗೆ ಬಂದಿದ್ದ, ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲೀಗ ಯುವಕನನ್ನು ಕೊಳ್ಳೆಗಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕ ಸಂಪರ್ಕದಲ್ಲಿದ್ದ ತಾಯಿ, ಸಹೋದರ ಹಾಗೂ ಮನೆಯವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಸಹೋದರ ಹಾಗೂ ತಾಯಿಯ ಗಂಟಲು ದ್ರವರ ಪರೀಕ್ಷೆಯನ್ನು ಒಳಡಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.