ಬಾಗಲಕೋಟೆ : ರಾಜ್ಯದಾದ್ಯಂತ ಕೊರೊನಾ ಆರ್ಭಟದ ನಡುವಲ್ಲೇ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯುತ್ತಿವೆ. ಬಾಗಲಕೋಟೆಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗೆ ಸೋಂಕು ತಗುಲಿದ ಬೆನ್ನಲ್ಲೇ ಇದೀಗ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೂ ಕೊರೊನಾ ಸೋಂಕು ಒಕ್ಕರಿಸಿದೆ. ಈ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೊರೊನಾ ಸೋಂಕು ಆತಂಕ ಶುರುವಾಗಿದೆ.

ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿರುವ ಆದರ್ಶ ವಿದ್ಯಾಲಯದ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಗೆ ಕೊರೋನಾ ಸೋಂಕುನ ದೃಢಪಟ್ಟಿದೆ. ಹಳ್ಳೂರು ಗ್ರಾಮದ ಪ್ರೌಢಶಾಲೆಯ ಶಿಕ್ಷಕಿಯನ್ನು ಬಾಗಲಕೋಟೆ ಆದರ್ಶ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಮೇಲ್ವಿಚಾರಕಿಯಾಗಿ ನಿಯೋಜಿಸಲಾಗಿತ್ತು. ಶಿಕ್ಷಕಿ ಜೂನ್ 25 ಮತ್ತು 26ರಂದು ನಡೆದ ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸಿದ್ದರು.

ಆದರೆ ಶಿಕ್ಷಕಿಗೆ ತಲೆನೋವು, ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಶಿಕ್ಷಕಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ಶಿಕ್ಷಕಿಯ ಜೊತೆಗೆ ಮುಧೋಳ ನಗರದಲ್ಲಿ ವಿದ್ಯಾರ್ಥಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದೀಗ ಕೊರೊನಾ ಭೀತಿ ಎದುರಾಗಿದೆ.