ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಮಹಾಮಾರಿಯ ಆರ್ಭಟ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿಂದು 161ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕಳೆದೊಂದು ವಾರದಿಂದಲೂ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ಉಡುಪಿ ಜಿಲ್ಲೆಯಲ್ಲಿಂದು ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಆದರೆ ಯಾದಗಿರಿ, ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿದೆ. ಅದ್ರಲ್ಲೂ ಗ್ರೀನ್ ಝೋನ್ ನಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು ಜಿಲ್ಲೆಯಲ್ಲಿ 61 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಕಳೆದೊಂದು ವಾರದಿಂದಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಇಂದು 29 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 522ಕ್ಕೆ ಏರಿಕೆ ಕಂಡಿದೆ. ಇನ್ನು ಕರಾವಳಿಯಲ್ಲಿ ಇನ್ನಿಲ್ಲದಂತೆ ಆರ್ಭಟಿಸಿದ್ದ ಕೊರೊನಾ ಸೋಂಕು ಉಡುಪಿಯಲ್ಲಿ ತಗ್ಗಿದ್ರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏರಿಕೆಯಾಗಿದೆ.

ಕೊರೊನಾ ಪೀಡಿತರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 210ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಕಲಬುರಗಿ ಜಿಲ್ಲೆಯಲ್ಲಿಂದು 10 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 769ಕ್ಕೆ ಏರಿದೆ.

ಉಳಿದಂತೆ ಬೀದರ್ 9, ಕೊಪ್ಪಳ 6, ಶಿವಮೊಗ್ಗ 4, ವಿಜಯಪುರ 2, ಚಿಕ್ಕಬಳ್ಳಾಪುರ 2, ಮೈಸೂರು 2, ಧಾರವಾಡ 2 ಮತ್ತು ಬಾಗಲಕೋಟೆ, ತುಮಕೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದ್ದು, ಇದುವರೆಗೆ 2605 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಲ್ಲದೇ 3248 ಮಂದಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಡ್ಲಿ ಕೊರೊನಾ ಮಹಾಮಾರಿ ರಾಜ್ಯದಲ್ಲಿ ಒಟ್ಟು 66 ಮಂದಿಯನ್ನು ಬಲಿಪಡೆದಿದೆ.