ಬೆಂಗಳೂರು : ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ ಡೌನ್ ಮುಂದುವರಿಯಲಿದ್ದು, ಹಿಂದಿನ ನಿರ್ಬಂಧಗಳೇ ಮುಂದುವರಿಯಲಿದೆ. ಅಲ್ಲದೇ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆದಿದೆ. ಸಭೆಯಲ್ಲಿ ಪ್ರಮುಖವಾಗಿ ಕೇರಳದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಒಂದು ವಾರಗಳ ಸಾಂಸ್ಥಿಕ ಕ್ವಾರಂಟೈನ್. ಒಂದು ವಾರದ ನಂತರ ಕೋವಿಡ್ ಪರೀಕ್ಷೆಗೆ ಒಳಪಡಲೇಬೇಕು ಎಂದು ಆದೇಶ ಹೊರಡಿಸಲಾಗುವುದು ಎಂದಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿವೀಕೆಂಡ್ ಕರ್ಪ್ಯೂ ಮುಂದುವರಿಯಲಿದೆ. ಕೇರಳ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು, ಗಡಿ ಜಿಲ್ಲೆಗಳಲ್ಲಿ ನಿರ್ಬಂಧವನ್ನು ಇನ್ನಷ್ಟು ಕಠಿಣ ಮಾಡಲಾಗುವುದು ಎಂದಿದ್ದಾರೆ. ಈ ಹಿಂದೆ ನಿರ್ಬಂಧ ಹೇರಿದ್ದ ಕೋಲಾರ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ನಿರ್ಬಂಧವನ್ನು ಸಡಿಲ ಮಾಡಲಿವೆ ಎಂದಿದ್ದಾರೆ. ಇನ್ನು ಮದುವೆ ಸಮಾರಂಭಗಳಲ್ಲಿ ಶೇ.50 ರಷ್ಟು ಮಂದಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದ್ದು, ಮದುವೆಗೆ 400 ಮಂದಿ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ.