ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಜನತಾ ಕರ್ಪ್ಯೂ ಹಾಗೂ ಲಾಕ್ ಡೌನ್ ಹೇರಿಕೆಯ ಬೆನ್ನಲ್ಲೇ ಕೊರೊನಾ ಟೆಸ್ಟಿಂಗ್ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಹೀಗೆ ಮಾಡೋದು ಕೊರೊನಾ ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದು ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು ಅವರು ಹೇಳಿದ್ದಾರೆ.
ಬೆಂಗಳೂರಲ್ಲಿ ನಿತ್ಯವೂ 2 ಲಕ್ಷದಷ್ಟು ಮಂದಿಗೆ ಟೆಸ್ಟ್ ಮಾಡಿಸಲಾಗುತ್ತಿತ್ತು. ಆದ್ರೀಗ ಟೆಸ್ಟಿಂಗ್ ಪ್ರಮಾಣ 90 ಸಾವಿರಕ್ಕೆ ಇಳಿದೆ. ಟೆಸ್ಟಿಂಗ್ ಪ್ರಮಾಣ ಇಳಿಕೆಯಾಗಿರುವುದರಿಂದಲೇ ಕೊರೊನಾ ಪಾಸಿಟಿವ್ ಪ್ರಮಾಣದಲ್ಲಿ ಇಳಿಕೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಗಿರಿಧರ ಬಾಬು ಅವರ ಪ್ರಕಾರ ಟೆಸ್ಟಿಂಗ್ ಕಡಿಮೆ ಮಾಡೊದು ಅಪಾಯಕಾರಿ. ಹೆಚ್ಚೆಚ್ಚು ಟೆಸ್ಟ್ ಮಾಡುವುದರಿಂದ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ. ಟೆಸ್ಟಿಂಗ್ ಕಡಿಮೆ ಮಾಡಿದ್ರೆ ಕೊರೊನಾ ಸೋಂಕಿನ ಲಕ್ಷಣ ಉಳ್ಳವರು ಟೆಸ್ಟಿಂಗ್ ನಿಂದ ಹೊರಗೆ ಉಳಿಯುತ್ತಾರೆ. ಇದರಿಂದಾಗಿ ಸೋಂಕು ಇನ್ನಷ್ಟು ಹೆಚ್ಚಳವಾಗಲಿದೆ ಎಂದಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೋವಿಡ್ ತಾಂತ್ರಿಕ ಸಮಿತಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಆದ್ರೆ ಸರಕಾರ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚು ಮಾಡಿರಲಿಲ್ಲ. ಆದ್ರೆ ಕೊರೊನಾ ಎರಡನೇ ಅಲೆ ಹೆಚ್ಚುತ್ತಿದ್ದಂತೆಯೇ ಟೆಸ್ಟಿಂಗ್ ಪ್ರಮಾಣವನ್ನೂ ಹೆಚ್ಚಿಸಿತ್ತು. ಆದ್ರೀಗ ಮತ್ತೆ ಟೆಸ್ಟಿಂಗ್ ಪ್ರಮಾಣದಲ್ಲಿ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳದೇ ಇದ್ರೆ ಅಪಾಯ ಗ್ಯಾರಂಟಿ ಅನ್ನೋ ಮಾತುಗಳು ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ.
