ನವದೆಹಲಿ : ಮೂರನೇ ಕೊರೊನಾ ಅಲೆ ಅಪ್ಪಳಿಸುವ ಆತಂಕವಿದ್ದರೂ ಇದುವರೆಗೂ ಕೊರೊನಾದಿಂದ ಮೃತಪಟ್ಟಿರುವವರಿಗೆ ಸೂಕ್ತ ಮರಣ ಪ್ರಮಾಣಪತ್ರ ನೀಡಲು ಮಾರ್ಗಸೂಚಿಗಳ ರಚನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ಬೆನ್ನಿಗೇ ಕೇಂದ್ರ ಸರಕಾರ ಎಚ್ಚೆತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮೂಲಕ ಕೋವಿಡ್ ಡೆತ್ ಸರ್ಟಿಫಿಕೇಟ್ ನೀಡಲು ಅಗತ್ಯವಾದ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ.
ಬಹಳ ಮುಖ್ಯವಾಗಿ ಕೊರೊನಾ ಪಾಸಿಟಿವ್ ಎಂದು ಪರೀಕ್ಷೆಯಿಂದ ಖಾತ್ರಿಯಾದ 30 ದಿನದೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟರೆ (ಆಸ್ಪತ್ರೆಯಲ್ಲಿ ಅಥವಾ ಹೋಮ್ ಕ್ವಾರಂಟೈನ್‌ನಲ್ಲಿ) ಕಡ್ಡಾಯವಾಗಿ ‘ಕೋವಿಡ್ ಡೆತ್’ ಎಂದು ಅಧಿಕಾರಿಗಳು ಪರಿಗಣಿಸಬೇಕಿದೆ. ಇದರೊಂದಿಗೆ, ಕೊರೊನಾ ಸೋಂಕಿತ 30 ದಿನಗಳಿಗೂ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾಗಿದ್ದರೆ, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ಸಾವು ಸಂಭವಿಸಿದಲ್ಲಿ, ಅದು ಕೂಡ ‘ಕೋವಿಡ್ ಡೆತ್’ ಎಂದೆನಿಸಿಕೊಳ್ಳಲಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆಯನ್ನುಮನೆ ಮನೆಗೆ ತೆರಳಿ ನೀಡಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಕೋವಿಡ್ ಕೇಸ್ ಎಂದು ಪರಿಗಣಿಸಲು ವ್ಯಕ್ತಿಯೊಬ್ಬರು ಕೊರೊನಾ ತಪಾಸಣೆ ಪರೀಕ್ಷೆ ಮಾಡಿಸಿಕೊಂಡಿರಬೇಕು. ಇಲ್ಲವೇ, ಆಸ್ಪತ್ರೆಗೆ ದಾಖಲಾಗಿದ್ದರೆ, ಚಿಕಿತ್ಸೆ ನೀಡಿದ ವೈದ್ಯರ ತಪಾಸಣೆಗಳ ಮೂಲಕ ಕೊರೊನಾ ಸೋಂಕಿನ ಲಕ್ಷ ಣಗಳಿವೆ ಎನ್ನುವುದು ಖಾತ್ರಿ ಆಗಿರಬೇಕು ಎನ್ನುತ್ತದೆ ಕೇಂದ್ರ ಸರ್ಕಾರದ ನಿಯಮಾವಳಿ.
ಇದನ್ನೂ ಓದಿ: 2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ
ಆಸ್ಪತ್ರೆ ಅಥವಾ ಮನೆಯಲ್ಲೇ ಮೃತಪಟ್ಟು (ಕೊರೊನಾದಿಂದಲೇ ಎಂದು ಖಾತ್ರಿ ಇಲ್ಲದೇ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದರೆ), ಫಾರ್ಮ್ 4 ಮತ್ತು ಫಾರ್ಮ್ 4ಎ ಸಲ್ಲಿಕೆ ಮಾಡಿರುವವರಿಗೆ ಕೋವಿಡ್-19 ಸಾವು ಎಂದು ಪರಿಗಣಿಸುವಂತೆಯೂ ಸರ್ಕಾರದ ನಿಯಮಾವಳಿಗಳು ಹೇಳಿವೆ. ವಿಷಪ್ರಾಶನ, ಸಾಮೂಹಿಕ ಹತ್ಯೆ, ಆತ್ಮಹತ್ಯೆ, ಅಪಘಾತಗಳಲ್ಲಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರೆ ಮಾತ್ರವೇ ‘ಕೋವಿಡ್ ಡೆತ್’ ಎಂದು ಪರಿಗಣಿಸಲಾಗುವುದಿಲ್ಲ.
(Death Certificate for those who died from Corona; New rule passed from Center)