ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯ ನಂತರ ಮಾತನಾಡಿರುವ ಮೋದಿ ಕೊರೊನಾ ಲಸಿಕೆಯ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ದೇಶದಲ್ಲಿ ಕೆಲವೇ ವಾರಗಳಲ್ಲಿ ಕೊರೊನಾ ಲಸಿಕೆ ಸಿದ್ದವಾಗಬಹುದೆಂದು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳ ಹಸಿರು ನಿಶಾನೆ ಬಳಿಕ ಕೇಂದ್ರ ಕೊರೊನಾ ಲಸಿಕೆ ವಿತರಣಾ ಕಾರ್ಯಕ್ಕೆ ಮುಂದಾಗಲಿದೆ. ಕೋವಿಡ್ 19 ಲಸಿಕೆಯನ್ನು ಮೊದಲು ಆರೋಗ್ಯ ಸೇವೆ ನಿರ್ವಹಿಸುವ ಕೊರೋನಾ ವಾರಿಯರ್ಸ್ಗೆ ನೀಡಲಾಗುವುದು. ಲಸಿಕೆಯ ಬೆಲೆ ಮತ್ತು ಅದರ ವಿತರಣೆ ಕುರಿತು ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಪಡಿಸಲಿ ದೇಶದ ವಿಜ್ಞಾನಿಗಳು ನಡೆಸುತ್ತಿರುವ ಕಾರ್ಯವನ್ನು ಅವರು ಶ್ಲಾಘಿಸಿದರು. ದೇಶದಲ್ಲಿ ಅಗ್ಗದ ಮತ್ತು ಸುರಕ್ಷಿತವಾದ ಲಸಿಕೆ ತಯಾರಗಲಿದೆ. ನಮ್ಮ ವಿಜ್ಞಾನಿಗಳು ಕೊರೋನಾ ವೈರಸ್ ಲಸಿಕೆ ತಯಾರಿಕೆಯಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಗತ್ತು ವೆಚ್ಚದಾಯಕ ಲಸಿಕೆಗಾಗಿ ಎದುರು ನೋಡುತ್ತಿದೆ, ಎಂಟು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ನಾವು ಅದಕ್ಕಾಗಿ ದೀರ್ಘ ಸಮಯ ಕಾಯಬೇಕಿಲ್ಲ. ಇನ್ನು ಈ ಲಸಿಕೆಯನ್ನು ಫ್ರಾಂಟ್ಲೈನ್ ಕೊರೋನಾ ವಾರಿಯರ್ ಹಾಗೂ ಹಿರಿಯರಿಗೆ ನೀಡಲಾಗುವುದು. ರಾಜ್ಯಗಳೊಂದಿಗೆ ಲಸಿಕೆ ಶೇಖರಣೆ ವ್ಯವಸ್ಥೆಯನ್ನು ಪರಿಶೀಲಿಸಿದ್ದೇವೆ. ಈಗಾಗಲೇ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಲಸಿಕೆ ವಿತರಣೆ ಕಾರ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸರ್ವಪಕ್ಷ ಸಭೆಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಎನ್ಸಿಪಿಯ ಶರದ್ ಪವಾರ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಸುಮಾರು 12 ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಭಾಗಿಯಾಗಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ವವರ್ಧನ್ ಕೂಡ ಉಪಸ್ಥಿತರಿದ್ದರು. ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಡಶಿ , ಅರ್ಜುಲ್ ರಾಮ್ ಮೇಘವಾಲ್ , ವಿ ಮುರಳೀಧರ್ ಮತ್ತು ಸಂಸತ್ ನಾಯಕರು ಭಾಗಿಯಾಗಿದ್ದರು ಎಂದು ವರದಿ ತಿಳಿಸಿದೆ.