ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯದಲ್ಲಿ ಸುಮಾರು 5 ರಿಂದ 7 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಿದ್ದವಾಗಿದೆ. ಕೊರೊನಾ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಹೆಚ್ಚು ಜನರಿಗೆ ವ್ಯಾಕ್ಸಿನ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ ಸೋಮವಾರ ಸುಮಾರು 7 ಲಕ್ಷ ಮಂದಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗುತ್ತದೆ ಎಂದಿದ್ದಾರೆ.
ಜೂನ್ 21ರಂದು ರಾಜ್ಯದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯೋಗದಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ. ಯೋಗ ಮಾಡುವವರಿಗೆ ಕೊರೊನಾ ಸೋಂಕು ಬಾಧಿಸಿಲ್ಲ. ಹೀಗಾಗಿ ಯೋಗ ದಿನಾಚರಣೆಯ ದಿನ ಸಿಎಂ ಯಡಿಯೂರಪ್ಪ ಅವರು ಕೂಡ ಯೋಗ ಮಾಡಲಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಯೋಗ ಮಾಡಲಿದ್ದಾರೆ. ಆಯುಷ್ ಇಲಾಖೆಯಿಂದ ಯೋಗ ದಿನಾಚರಣೆಯನ್ನ ಆಯೋಜಿಸಲಾಗುತ್ತಿದೆ. ಯೋಗ ಗುರುಗಳು ಮಾಡುವ ಯೋಗವನ್ನು ಪ್ರಸಾರ ಮಾಡಲಾಗುತ್ತದೆ ಎಂದಿದ್ದಾರೆ.