ಚಿಕ್ಕಬಳ್ಳಾಪುರ : ದೇಶದಾದ್ಯಂತ ಕೊರೊನಾ ಲಸಿಕೆ ನೀಡುವ ಕುರಿತು ಅಭಿಯಾನ ನಡೆಯುತ್ತಿದೆ. ಲಸಿಕೆ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳು ಜನರನ್ನು ಪ್ರೇರೆಪಿಸುತ್ತಿವೆ. ಆದ್ರೆ ಇಲ್ಲೊಬ್ಬರು ತಹಶೀಲ್ದಾರ್ ಕೊರೊನಾ ಲಸಿಕೆ ಪಡೆಯದ ಕುಟುಂಬಗಳಿಗೆ ಪಡಿತರ ನಿಲ್ಲಿಸುವ ಆದೇಶ ಹೊರಡಿಸಿದ್ದಾರೆ. ತಹಶೀಲ್ದಾರ್ ಆದೇಶಕ್ಕೆ ಜನರು ಬೆಚ್ಚಿಬಿದ್ದಿದ್ರೆ, ಇನ್ನೊಂದೆಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಹಶೀಲ್ದಾರ್ ಹನುಮಂತರಾಯಪ್ಪ ಅವರು, ಕೊರೊನಾ ಲಸಿಕೆ ಪಡೆಯದ ಕುಟುಂಬಗಳಿಗೆ ಪಡಿತರ ನಿಲ್ಲಿಸಿ ಅನ್ನೋ ಆದೇಶ ಹೊರಡಿಸಿದ್ದಾರೆ. ತಾಲೂಕಿನಲ್ಲಿ ಲಸಿಕೆಯನ್ನು ಪಡೆಯದ ಕುಟುಂಬಗಳಿಗೆ ಪಡಿತರ ನೀಡುವುದನ್ನು ನಿಲ್ಲಿಸಬೇಕು. ಈಗಾಗಲೇ ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ನಡೆದ ಸಭೆಯಲ್ಲಿ ಅಗಸ್ಟ್, ಸಪ್ಟೆಂಬರ್ ತಿಂಗಳಲ್ಲಿ ಕೋವಿಡ್ ವ್ಯಾಕ್ಸಿನ್ ಪಡೆಯದವರಿಗೆ ಪಡಿತರ ನೀಡುವುದನ್ನು ನಿಲ್ಲಿಸಲು ಸೂಚಿಸಲಾಗಿದೆ. ಈ ಕುರಿತು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಡಂಗುರ ಸಾರುವ ಮೂಲಕ ಜನರಿಗೆ ಮಾಹಿತಿ ನೀಡುವಂತೆ ಹೇಳಲಾಗಿದೆ.
ಪಡಿತರ ಪಡೆಯಬೇಕಾದವರು ಮೊದಲ ಅಥವಾ ಎರಡನೇ ಡೋಸ್ ಪಡೆದ ಪ್ರಮಾಣಪತ್ರವನ್ನು ನೀಡಬೇಕು. ಲಸಿಕೆ ಪಡೆದವರ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರಿಂದ ಪಡೆಯಬೇಕು. ಅಲ್ಲದೇ ಮೊಬೈಲ್‌ನಲ್ಲಿ ಲಸಿಕೆ ಪಡೆದ ಮಾಹಿತಿಯನ್ನು ಪರಿಶೀಲನೆಯನ್ನು ನಡೆಸಬೇಕು. ನ್ಯಾಯ ಬೆಲೆ ಅಂಗಡಿಯ ನಾಮಫಲಕದ್ಲಿ ಕಡ್ಡಾಯವಾಗಿ ಕೊರೊನಾ ವ್ಯಾಕ್ಸಿನ್ ಪಡೆಯದವರಿಗೆ ಪಡಿತರ ವಿತರಣೆ ಇಲ್ಲಾ ಅನ್ನುವ ಕುರಿತು ಪ್ರಕಟಿಸುವಂತೆ ಆದೇಶದಲ್ಲಿ ಹೇಳಲಾಗಿದೆ.
ಆದರೆ ಪಡಿತರ ಪಡೆಯುವುದು ಪ್ರತಿಯೊಬ್ಬ ಭಾರತೀಯರ ಹಕ್ಕು. ಕೇವಲ ಕೊರೊನಾ ಲಸಿಕೆ ಪಡೆಯದವರಿಗೆ ಪಡಿತರ ನಿಲ್ಲಿಸುವುದು ಎಷ್ಟು ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕೊರೊನಾ ಲಸಿಕೆಯನ್ನು ಜನರಿಗೆ ನೀಡುವಲ್ಲಿಯೂ ಸರಕಾರ ಹಾಗೂ ಜಿಲ್ಲಾಡಳಿತ ವಿಫಲವಾಗಿದೆ. ಅದನ್ನು ಮುಚ್ಚಿ ಹಾಕುವ ಸಲುಗಾಗಿ ಜನರಿಗೆ ಬೆದರಿಕೆಯೊಡ್ಡುವುದು ಎಷ್ಟು ಸರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ : ಭಾರತದಲ್ಲಿ ಇನ್ನೂ ಮುಗಿದಿಲ್ಲ ಎರಡನೇ ಅಲೆ : ಕೇಂದ್ರ ಆರೋಗ್ಯ ಇಲಾಖೆ ಕೊಟ್ಟಿದೆ ಎಚ್ಚರಿಕೆ
ಇದನ್ನೂ ಓದಿ : ಅಂತರ್ ರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ : ಇನ್ಮುಂದೆ ಅರ್‌ಟಿಪಿಸಿಆರ್ ಕಡ್ಡಾಯವಲ್ಲ !