ಶ್ರೀನಗರ : ಮೂವರು ಉಗ್ರರಿಗೆ ತನ್ನ ಮನೆಯಲ್ಲಿಯೇ ಆಶ್ರಯಕೊಟ್ಟಿರೋ ಆರೋಪಕ್ಕೆ ಜಮ್ಮು-ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಸಿಲುಕಿದ್ದಾರೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿಎಸ್ಪಿ ದೇವಿಂದರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರೊಂದಿಗೆ ಒಂದೇ ವಾಹನದಲ್ಲಿ ದೆಹಲಿಗೆ ತೆರಳುತ್ತಿದ್ದ ದೇವಿಂದರ್ ಸಿಂಗ್ ಅವರನ್ನು ಶನಿವಾರ ಶೋಪಿಯಾನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಸತತ ಎರಡು ದಿನಗಳ ವಿಚಾರಣೆ ನಡೆಸಿದ್ದು ಇನ್ನೂ ಕೂಡ ಪೊಲೀಸರ ತಂಡ ಮತ್ತು ಗುಪ್ತಚರ ದಳದ ಅಧಿಕಾರಿಗಳು ವಿಚಾರಣೆ ನಡೆಸುತ್ತಲೇ ಇದ್ದಾರೆ. ದೇವಿಂದರ್ ಸಿಂಗ್ ಅವರು ಬರೀ ಉಗ್ರರ ಜತೆ ಪ್ರಯಾಣ ಮಾಡಿದ್ದಷ್ಟೇ ಅಲ್ಲ, ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿರುವ ಆರ್ಮಿ XV ಕಾರ್ಪ್ಸ್ ಮುಖ್ಯಕಚೇರಿಯ ಬಳಿ ಇರುವ ತಮ್ಮ ನಿವಾಸದಲ್ಲಿ ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇವಿಂದರ್ ಸಿಂಗ್ ಅವರು ಕಳೆದ ನಾಲ್ಕುತಿಂಗಳ ಹಿಂದಷ್ಟೇ ರಾಷ್ಟ್ರಪತಿ ಪದಕದಿಂದ ಪುರಸ್ಕೃತರಾಗಿದ್ದಾರೆ. ಹಲವು ಉಗ್ರ ವಿರೋಧಿ ಕಾರ್ಯಾಚರಣೆಯಲ್ಲೂ ಸಕ್ರಿಯರಾಗಿ ಪಾಲ್ಗೊಂಡವರು. ಹೀಗೆ ಉಗ್ರರಿಗೆ ಆಶ್ರಯ ಕೊಟ್ಟು, ಅವರೊಂದಿಗೆ ಪ್ರಯಾಣಿಸುವ ಕಾರಣ ಏನಿತ್ತು ಗೊತ್ತಿಲ್ಲ. ಇಬ್ಬರು ಉಗ್ರರೊಂದಿಗೆ ಇದ್ದ ಪೊಲೀಸ್ ಅಧಿಕಾರಿಯನ್ನೂ ಉಗ್ರ ಎಂದೇ ಪರಿಗಣಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.