ಪುಣೆ : ಡ್ರೈವಿಂಗ್ ಕಲಿಸುವ ನೆಪದಲ್ಲಿ ತರಬೇತುದಾರನೋರ್ವ ಮಹಿಳಾ ಟೆಕ್ಕಿಯಿಂದ ಬರೋಬ್ಬರಿ 2.5 ಲಕ್ಷ ರೂಪಾಯಿ ದೋಚಿದ್ದಾನೆ. ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿ ಶ್ರೀದೇವಿ ರಾವ್ ಎಂಬವರೇ ಹಣವನ್ನು ಕಳೆದುಕೊಂಡವರು. ಪುಣೆಯ ಕೋಂಧ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀದೇವಿ ರಾವ್ ಪೋಷಕರು ಕೋಂಧ್ವಾದಲ್ಲಿ ವಾಸವಾಗಿದ್ದರು. ದೀಪಾವಳಿಯ ಸಂದರ್ಭದಲ್ಲಿ ಪೋಷಕರನ್ನು ಭೇಟಿಯಾಗಲು ಮಹಿಳೆ ತೆರಳಿದ್ದರು. ಈ ವೇಳೆಯಲ್ಲಿ ರಾಜೇಶ್ ಸಿಂಗ್ ಎಂಬಾತ ಟೆಕ್ಕಿಗೆ ಡ್ರೈವಿಂಗ್ ಕಲಿಸುವುದಾಗಿ ತಿಳಿಸಿದ್ದಾನೆ.
ಅಂತೆಯೇ ರಾಜೇಶ್ ಸಿಂಗ್ ಡ್ರೈವಿಂಗ್ ಹೇಳಿಕೊಡುವುದಾಗಿ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಟೆಕ್ಕಿಯ ಕೈಗಳನ್ನು ಕಟ್ಟಿದ್ದಾನೆ. ನಂತರದಲ್ಲಿ ಟೆಕ್ಕಿಯ ಮೊಬೈಲ್ ಪಾಸ್ ವರ್ಡ್ ನ್ನು ಬಲವಂತವಾಗಿ ಪಡೆದುಕೊಂಡು ಗೂಗಲ್ ಪೇ ಮೂಲಕ ತನ್ನ ಖಾತೆಗೆ ಬರೋಬ್ಬರಿ 40 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ.

ಅಲ್ಲದೇ ಎಟಿಎಂ ಕಾರ್ಡ್ ಮೂಲಕ 10 ಸಾವಿರ ರೂಪಾಯಿ ವಿಥ್ ಡ್ರಾ ಮಾಡಿದ್ದಾನೆ. ಮಾತ್ರವಲ್ಲ ಟೆಕ್ಕಿಯ ಬಳಿಯಲ್ಲಿದ್ದ 2 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ. ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 2.5 ಲಕ್ಷ ರೂಪಾಯಿ ಮೌಲ್ಯದ ಹಣವನ್ನು ಟೆಕ್ಕಿ ಮಹಿಳೆಯಿಂದ ಲೂಟಿ ಮಾಡಲಾಗಿದೆ.
ಆರೋಪಿ ಪರಿಚಿತನಾಗಿದ್ದು, ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಟೆಕ್ಕಿಗೆ ಕಳೆದ ಎಂಟು ದಿನಗಳಿಂದ ಡ್ರೈವಿಂಗ್ ಕಲಿಸುವ ನೆಪದಲ್ಲಿ ಹಣ ದೋಚಿ ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಂಧ್ವಾ ಪೊಲೀಸ್ ಠಾಣೆಯಲ್ಲಿ ರಾಜೇಶ್ ಸಿಂಗ್ ಮತ್ತು ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಆರೋಪಿಗಳನ್ನೂ ಹುಡುಕುತ್ತೇವೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 (ಅಪಹರಣ) ಮತ್ತು 394 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೊಂಧ್ವಾ ಪಿಎಸ್‍ನ ಹಿರಿಯ ಪೆÇಲೀಸ್ ಇನ್ಸ್‍ಪೆಕ್ಟರ್ ಸರ್ದಾರ್ ಪಾಟೀಲ್ ತಿಳಿಸಿದ್ದಾರೆ.