ಚಿಕ್ಕಮಗಳೂರು : ಈತ ಅಂತಿಂಥ ಆಸಾಮಿ ಅಲ್ಲ. ಪಕ್ಕಾ 420 ಕಣ್ರೀ, ಪಕ್ಕಾ 420. ಆತ ಮಕ್ಮಲ್ ಟೋಪಿ ಹಾಕಿದ್ದು ಒಬ್ರಿಗೆ, ಇಬ್ರಿಗೆ ಅಲ್ಲ, ಬದಲಾಗಿ ನೂರಾರು ಮಂದಿಗೆ.. ! ನೂರಾರು ಯುವಕ, ಯುವತಿಯರನ್ನು ವಂಚಿಸಿದ್ದ ಭೂಪ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಹೀಗೆ ಮಳ್ಳನ ತರ ಪೋಸ್ ಕೊಡ್ತಿರುವ ಈತನ ಹೆಸರು ಪ್ರಭಾಕರ್. ಸಿಲಿಕಾನ್ ಸಿಟಿ ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ. ಬಿಬಿಎಂ ಪದವೀಧರನಾಗಿರುವ ಪ್ರಭಾಕರ. ತಾನು ರಿಯಲ್ ಎಸ್ಟೇಟ್ ಕೆಲಸ ಮಾಡ್ತೀನಿ ಅಂತಾ ಕೆಲವರ ಬಳಿ ಹೇಳಿಕೊಂಡಿದ್ರೆ, ಯುವಕ ಯುವತಿಯರ ಬಳಿಯಲ್ಲಿ ಪಿಯುಸಿ, ಎಸೆಸೆಲ್ಸಿ ಬೋರ್ಡ್ ನ ಚೀಫ್ ಆಫೀಸರ್. ಇಂಡಿಯನ್ ಪೋಸ್ಟ್ ನ ಕಂಟ್ರೋಲರ್. ಚೆಸ್ಕಾಂ, ಬೆಸ್ಕಾಂನ ಸೂಪರ್ ಮ್ಯಾನ್. ಬರೀ ಇಷ್ಟೇ ಅಲ್ಲ, ಬೆಂಗಳೂರು ಯುನಿವರ್ಸಿಟಿ, ವಿಟಿಯುನ ಆಫೀಸರ್ ಅಂತಾ ಬುರುಡೆ ಬಿಡ್ತಿದ್ದ.

ಈತ ನಿರುದ್ಯೋಗಿ ಯುವಕ – ಯುವತಿಯರನ್ನೇ ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸುವ ಆಮಿಷವೊಡ್ಡುತ್ತಿದ್ದ. ಹೀಗೆ ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದಾನೆ. ಬಂದ ಹಣದಲ್ಲಿ ಹೈಫೈ ಲೈಪ್ ಲೀಡ್ ಮಾಡ್ತಿದ್ದ ಪ್ರಭಾಕರ, ತಿರುಪತಿ, ವೈಷ್ಣೋದೇವಿ ಸೇರಿದಂತೆ ಹಲವೆಡೆ ಹೆಲಿಕಾಪ್ಟರ್ ನ ಬಾಡಿಗೆ ಮಾಡ್ಕೊಂಡ್ ಜಾಲಿ ಟ್ರಿಪ್ ಮಾಡ್ತಿದ್ದ.
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳ ಯುವಕ- ಯುವತಿಯರಿಗೆ ಸರಿಯಾಗಿಯೇ ಯಮಾರಿಸಿದ್ದಾನೆ. ಕೆಲಸ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರ ಹತ್ತಿರವೂ ಕನಿಷ್ಠ 7 ಲಕ್ಷದಿಂದ 15 ಲಕ್ಷದವರೆಗೂ ವಸೂಲಿ ಮಾಡಿದ್ದಾನೆ. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಈತ ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ಪೀಕಿದ್ದಾನೆ.

ಈ ಕಿಲಾಡಿ ನಕಲಿ ಆಫೀಸರ್, ಕೇವಲ ಕೆಲಸದ ಆಸೆ ತೋರಿಸುತ್ತಿರಲಿಲ್ಲ. ಈತನ ಜೊತೆ ಯಾವಾಗ್ಲೂ ಬಂಡಲ್ ಗಟ್ಟಲೇ ಶಿಕ್ಷಣ ಇಲಾಖೆ, ಇಸ್ರೋ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಆಫರ್ ಲೆಟರ್ ಗಳನ್ನ ಇಟ್ಟುಕೊಳ್ಳುತ್ತಿದ್ದ. ಈ ಆಫರ್ ಲೆಟರ್, ಅಪಾಯಿಂಟ್ಮೆಂಟ್ ಲೆಟರ್ ನೋಡಿದ ಯಾರಿಗೆ ಆದ್ರೂ ಅನುಮಾನ ಬರೋದಕ್ಕೆ ಛಾನ್ಸೆ ಇರಲಿಲ್ಲ. ಅಲ್ಲದೇ ಕೆಲವರಿಗೆ ಒಂದು ತಿಂಗಳು, ಎರಡು ತಿಂಗಳು ಸಂಬಳ ಕೂಡ ಕೊಟ್ಟು ಮತ್ತಷ್ಟು ಜನರು ಬಲೆಗೆ ಬೀಳುವಂತೆ ಪರೋಕ್ಷವಾಗಿ ಖತರ್ನಾಕ್ ಗೇಮ್ ಆಡ್ತಿದ್ದ.

ಪ್ರಭಾಕರ ಕಳೆದೊಂದು ವರ್ಷದಿಂದಲೂ ಅದೆಷ್ಟೊ ನಿರುದ್ಯೋಗಿಗಳನ್ನೇ ಬಂಡವಾಳ ಮಾಡಿಕೊಂಡು ಇಲ್ಲಿವರೆಗೂ ಕೋಟಿಗಟ್ಟಲೇ ವಂಚಿಸುತ್ತಲೇ ಬರ್ತಿದ್ದ. ಕೊನೆಗೆ ಈತನಿಗೆ 7 ಲಕ್ಷ ಕೊಟ್ಟು ಯಮಾರಿದ್ದ ಚಿಕ್ಕಮಗಳೂರಿನ ಉಮೇಶ್, ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ.
ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ನಗರ ಠಾಣೆ ಇನ್ಸ್ ಪೆಕ್ಟರ್ ತೇಜಸ್ವಿ, ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರ ಜೊತೆ ಮಾತಾಡಿ ಈ ನಕಲಿ ಅಧಿಕಾರಿಯನ್ನ ಖೆಡ್ಡಾಕ್ಕೆ ಕೆಡವಲು ಅಖಾಡ ಸಿದ್ದಪಡಿಸಿದ್ರು. ಕೊನೆಗೆ ಚಿಕ್ಕಮಗಳೂರಲ್ಲೇ ಆರೋಪಿ ಕೈಗೆ ಕೋಳ ತೊಡಿಸಿದ ಇನ್ಸ್ ಪೆಕ್ಟರ್ ತೇಜಸ್ವಿ ಟೀಂ, ಆರೋಪಿಯ ಜನ್ಮ ಜಾಲಾಡಿ, ಸದ್ಯ 80 ಲಕ್ಷದಷ್ಟು ಹಣ ರಿಕವರಿ ಮಾಡಿ ಖತರ್ನಾಕ್ ಆಸಾಮಿಗೆ ಜೈಲಿನ ದಾರಿ ತೋರಿಸಿದ್ದಾರೆ.

ಒಟ್ಟಿನಲ್ಲಿ ಪ್ರಭಾಕರ ಬಂಧನದ ಬೆನ್ನಲ್ಲೇ ಈತನನ್ನೇ ನಂಬಿ ಹಣ ನೀಡಿದ್ದವರೆಲ್ಲಾ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ನಕಲಿ ಆಫೀಸರ್ ವಿರುದ್ದ ಇನ್ನಷ್ಟು ಪ್ರಕರಣ ದಾಖಲಾಗೋ ಸಾಧ್ಯತೆಯಿದೆ.