Bus Accident Nagodi Ghat : ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ರಸ್ತೆ ಪಕ್ಕದ ಚರಂಡಿಗೆ ಉರುಳಿದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ನಾಗೋಡಿ ಘಾಟಿ (Nagodi Ghat) ಯಲ್ಲಿ ನಡೆದಿದೆ. ಘಟನೆಯಲ್ಲಿ ಶಾಲೆ, ಕಾಲೇಜಿಗೆ ತೆರಳುತ್ತಿದ್ದ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಖಾಸಗಿ ಬಸ್ ಶಿವಮೊಗ್ಗದಿಂದ ಕೊಲ್ಲೂರಿನ ಕಡೆಗೆ ಚಲಿಸುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಮಳೆಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ಸತತ ರಜೆ ಇದ್ದ ಕಾರಣಕ್ಕೆ ವಿದ್ಯಾರ್ಥಿಗಳು ತಮ್ಮ ಊರಿಗೆ ತೆರಳಿದ್ದರು. ಇಂದು ಮುಂಜಾನೆ ಶಾಲೆ, ಕಾಲೇಜಿಗೆ ವಾಪಾಸಾಗುತ್ತಿದ್ದ ವೇಳೆಯಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿ ಕೊಲ್ಲೂರು ಪದವಿ ಪೂರ್ವ ಕಾಲೇಜಿನ 10 ಹಾಗೂ ಕೊಲ್ಲೂರು ಪ್ರೌಢಶಾಲೆಯ 7 ವಿದ್ಯಾರ್ಥಿಗಳು ಇದ್ದರು ಎಂದು ತಿಳಿದು ಬಂದಿದೆ.

ಅಪಘಾತದಿಂದ ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಚಾಲಕನಿಗೆ ನಿಯಂತ್ರಣ ತಪ್ಪಿ ಬಸ್ಸು ಚರಂಡಿಗೆ ಇಳಿದಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ಸ್ವಲ್ಪ ಪ್ರಮಾಣದಲ್ಲಿ ಜಖಂ ಗೊಂಡಿದೆ.
ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಳ : ಶಾಲೆ, ಕಾಲೇಜು ಬಂದ್, ಲಾಕ್‌ಡೌನ್ ಜಾರಿ ?
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಎಸ್‌ಟಿ ಸಿದ್ದಲಿಂಗಪ್ಪ, ಬೈಂದೂರು ಬಿಇಒ ನಾಗೇಶ್ ನಾಯಕ್, ಕೊಲ್ಲೂರು ಪೊಲೀಸ್‌ಯ ಪಿಎಸ್‌ಐಗಳಾದ ವಿನಯಂ ಎಂ. ಕೋರ್ಲಪಾಟಿ, ಸುಧಾರಾಣಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆಯನ್ನು ನಡೆಸಿದ್ದಾರೆ. ಸದ್ಯ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಎಲ್ಲರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?
ಕಳೆದ ಒಂದು ವಾರದ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕಳೆದ ವಾರವಿಡಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕುಗಳಲ್ಲಿ ಈ ಬಾರಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಮಳೆ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಉಡುಪಿ : ಕ್ರಿಪ್ಟೋ ಕರೆನ್ಸಿ ಹೂಡಿಕೆ ಆಸೆ ತೋರಿಸಿ 67 ಲಕ್ಷ ರೂಪಾಯಿ ವಂಚನೆ
Bus Accident Nagodi Ghat near Kollur Udupi 17 Students Injured