ಕಾಪು : ಮಂಗಳೂರಿನಿಂದ ಉಡುಪಿಯ ಕಡೆಗೆ ಚಲಿಸುತ್ತಿದ್ದ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೆದ್ದಾರಿಯಲ್ಲಿರುವ ಡಿವೈಡರ್ ನ ಮೇಲಿನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಉಡುಪಿ ಜಿಲ್ಲೆಯ ಕಾಪುವಿನ ಮೆಸ್ಕಾಂ ಕಚೇರಿಯ ಬಳಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ 5 ಮಂದಿಗೆ ಗಂಭೀರ ಗಾಯವಾಗಿದೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಉಡುಪಿಯ ಕಡೆಗೆ ಚಲಿಸುತ್ತಿದ್ದ ಕಾರು ಕಾಪುವಿನ ಮೆಸ್ಕಾಂ ಕಚೇರಿಯ ಬಳಿಗೆ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆಯಲ್ಲಿ ಕಾರು ಡಿವೈಡರ್ ಮೇಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.

ಅಪಘಾತದಿಂದಾಗಿ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕಾಪು ಎಸ್ಸೈ ರಾಜಶೇಖರ ಬಿ. ಸಾಗನೂರು, ಕ್ರೈಂ ಎಸ್ಸೈ ಐ.ಆರ್. ಗಡ್ಡೇಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.