ಕುಂದಾಪುರ : ಸಿಸಿ ಲೈವ್ ವೀಕ್ಷಕನೊಬ್ಬನ ಸಮಯಪ್ರಜ್ಞೆಯಿಂದ ದೇವಸ್ಥಾನವೊಂದರಲ್ಲಿ ಕಳವು ಮಾಡಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಬಿಟ್ಟು ಓಡಿದ್ದಾರೆ. ಕುಂದಾಪುರ ತಾಲೂಕಿನ ಕೋಟೇಶ್ವರದ ಕಟ್ಕೆರೆ ಶ್ರೀ ನಾಹಾದೇವಿ ಕಾಳಿಕಾಂಬ ಅಮ್ಮನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಅಷ್ಟಕ್ಕೂ ರಾತ್ರಿಯ ವೇಳೆಯಲ್ಲಿ ಕಳವು ಮಾಡುವ ಸಲುವಾಗಿ ದೇವಸ್ಥಾನಕ್ಕೆ ಬಂದಿದ್ದ ಕಳ್ಳರು ಸಿಸಿಟಿವಿ ವಯರ್ ಕಟ್ ಮಾಡಿ, ಡಿವಿಆರ್ ತೆಗೆದಿದ್ದಾರೆ.

ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ದೇವಸ್ಥಾನದ ಒಳಗಿನ ದೇವಿ ಮೂರ್ತಿಯ ಕೈಯಲ್ಲಿದ್ದ ಬೆಳ್ಳಿಯ ಖಡ್ಗ, ಕೊಡಲಿ ಕಳವುಗೈದಿದ್ದಾರೆ.

ಆದರೆ ರಾತ್ರಿ 1.27 ರ ಸುಮಾರಿಗೆ ಸಿಸಿ ಕ್ಯಾಮೆರಾ ಬಂದ್ ಆಗಿತ್ತು. ಇದನ್ನು ಗಮನಿಸಿದ ಸಿಸಿ ಕ್ಯಾಮೆರಾ ವೀಕ್ಷಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಠಾಣೆಯಿಂದ ಬೀಟ್ ಸಿಬ್ಬಂದಿ ತಕ್ಷಣ ದೇವಸ್ಥಾನದ ಬಳಿ ಬಂದಾಗ ಯಾವುದೋ ವಾಹನ ಬಂದದ್ದನ್ನು ಅರಿತ ಕಳ್ಳರು ಪರಾರಿಯಾಗಿದ್ದಾರೆ.

ದೇವಸ್ಥಾನದ 26 ಲಕ್ಷದ ಬೆಳ್ಳಿ, 5 ಲಕ್ಷದ ಮೌಲ್ಯದ ಸೊತ್ತುಗಳು ದೇಗುಲದಲ್ಲೇ ಉಳಿದಿದೆ. ಬಾಗಿಲಿಗೆ ಅಳವಡಿಸಿ ಬೆಳ್ಳಿ ಲೇಪನವನ್ನು ಕಿತ್ತು ತೆಗೆಯಲು ಯತ್ನಿಸಿ ಹಾಳುಗೈದಿದ್ದಾರೆ.

ದೇವಸ್ಥಾನದಲ್ಲಿ ಈ ಹಿಂದೆಯೂ ಕಳ್ಳತನವಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.