ಬೆಂಗಳೂರು : ಮಾಜಿ ಸಚಿವರ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದ್ದು, ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿ ಎಫ್ ಐಆರ್ ದಾಖಲು ಆದ ಬೆನ್ನಲ್ಲೇ ಸಂತ್ರಸ್ತ ಯುವತಿ ವಿಡಿಯೋ ಮೂಲಕ ರಕ್ಷಣೆ ಕೋರಿದ್ದಾರೆ. ವಿಡಿಯೋದಲ್ಲಿ ಯುವತಿ ಆತ್ಮಹತ್ಯೆಯ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಯುವತಿಗೆ ಧೈರ್ಯ ತುಂಬುವ ಕಾರ್ಯವನ್ನು ಮಹಿಳಾ ಆಯೋಗ ಮಾಡಲಿದೆ. ಯುವತಿ ಧೃತಿಗೆಡಬಾರದೆನ್ನುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದೇವೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ಯುವತಿಗೆ ರಕ್ಷಣೆ ನೀಡುವಂತೆ ಕೋರಿ ಸೋಮವಾರ ಆಯೋಗ ಪತ್ರಬರೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.