ನವದೆಹಲಿ : ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೋರ್ಟ್ ಸಮನ್ಸ್ ಮತ್ತು ನೋಟಿಸ್‌ಗಳನ್ನು ಇಮೇಲ್, ವಾಟ್ಸ್‌ಆ್ಯಪ್ ಮೂಲಕವೂ ಕಳುಹಿಸಬಹುದು. ಸಾಮಾನ್ಯವಾಗಿ ಕಳುಹಿಸುವ ಸಮನ್ಸ್ ಮತ್ತು ನೋಟಿಸ್‌ಗೆ ಇರುವಷ್ಟೆ ಮಾನ್ಯತೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ನೇತೃತ್ವದ ನ್ಯಾಯಪೀಠ ಹೇಳಿದೆ.

ಸಮನ್ಸ್ ಅಥವಾ ನೋಟಿಸ್ ಸಂಬಂಧಪಟ್ಟ ವ್ಯಕ್ತಿಗೆ ತಲುಪಿದೆಯೇ ಎನ್ನುವುದಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಮೂಡುವ ಎರಡು ನೀಲಿ ರೈಟ್ ಮಾರ್ಕ್‌ಗಳೇ ಪುರಾವೆ. ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಸಮನ್ಸ್/ನೋಟಿಸ್ ತಲುಪಿಲ್ಲವೆಂದು ಕಲಾಪ ಮುಂದೂಡುವುದು ತಪ್ಪುತ್ತದೆ. ಕಲಾಪ ಚುರುಕಿನಿಂದ ನಡೆಯಲು ಅನುಕೂಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಲ್ಲದೇ ಕೊರೊನಾ ವೈರಸ್ ಸೋಂಕಿನಿಂದಾಗಿ ಅಂಚೆ ಕಚೇರಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನೋಟಿಸ್ ಹಾಗೂ ಸಮನ್ಸ್ ನ್ನು ಇಮೇಲ್ ಅಥವಾ ವಾಟ್ಸ್‌ಆ್ಯಪ್ ಸೇರಿದಂತೆ ಇತರ ವರ್ಚುವಲ್ ಮಾಧ್ಯಮದ ಮೂಲಕವೂ ಕಳುಹಿಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.