ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಲಿಂಕ್ ಇದೀಗ ಕರಾವಳಿಗೂ ಚಾಚಿದೆ. ಕರಾವಳಿ ಮೂಲಕ ಯುವತಿಯೋರ್ವಳಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇನ್ನು ಡ್ರಗ್ ಪೆಡ್ಲರ್ ಯುವತಿ ಕರಾವಳಿಯ ಪಾರ್ಟಿಗಳಿಗೂ ಡ್ರಗ್ಸ್ ಸಪ್ಲೈ ಮಾಡಿರೋದು ಬಯಲಾಗಿದೆ.

ಡ್ರಗ್ ಪೆಡ್ಲರ್ ಅನಿಕಾ ಬಂಧನದ ಬೆನ್ನಲ್ಲೆ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ದಂಧೆಯ ಕರಾಳಮುಖ ಅನಾವರಣಗೊಂಡಿದೆ. ಇದೀಗ ಮಂಗಳೂರು ಮೂಲದ ಪ್ರಥ್ವಿ ಶೆಟ್ಟಿ ಎಂಬಾಕೆಯ ಹೆಸರು ದಂಧೆಯಲ್ಲಿ ಬಲವಾಗಿ ಕೇಳಿಬಂದಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ನೆಲೆಸಿರುವ ಪ್ರಥ್ವಿ ಶೆಟ್ಟಿ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು.

ಅಷ್ಟೇ ಅಲ್ಲಾ ತನ್ನ ಮನೆಯಲ್ಲಿಯೇ ಡ್ರಗ್ಸ್ ಸೇವನೆ ಮಾಡೋದಕ್ಕೂ ಅವಕಾಶ ಕಲ್ಪಿಸಿದ್ದಳು. ನಿತ್ಯವೂ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಪ್ರಥ್ವಿ ಶೆಟ್ಟಿ ಬೆಂಗಳೂರು ಮಾತ್ರವಲ್ಲದೇ ಮಂಗಳೂರಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೂ ಡ್ರಗ್ಸ್ ಸಪ್ಲೈ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲೀಗ ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ.

ಕರಾವಳಿಯ ಹೋಟೆಲ್, ಪಬ್ ಗಳಲ್ಲಿಯೂ ಇದೀಗ ಡ್ರಗ್ಸ್ ಪಾರ್ಟಿ ನಡೆದಿರೋ ಅನುಮಾನಗಳು ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿಯೂ ಡ್ರಗ್ಸ್ ದಂಧೆ ಸಕ್ರೀಯವಾಗಿದ್ದು, ಈಗಾಗಲೇ ಪೊಲೀಸರು ಹಲವು ಕಡೆಗಳಲ್ಲಿ ದಾಳಿ ನಡೆಸಿ ಗಾಂಜಾ ಮತ್ತು ಡ್ರಗ್ಸ್ ಜಾಲವನ್ನು ಬೇಧಿಸಿದ್ದಾರೆ.

ಇದೀಗ ಪ್ರಥ್ವಿ ಶೆಟ್ಟಿಯ ವಿಚಾರಣೆಯ ವೇಳೆಯಲ್ಲಿ ಸ್ಪೋಟಕ ಮಾಹಿತಿಗಳು ಹೊರ ಬೀಳುವ ಸಾಧ್ಯತೆಯಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಈಗಾಗಲೇ ಬಾಲಿವುಡ್ ಜೊತೆಗೆ ನಂಟು ಹೊಂದಿದೆ. ಇದೀಗ ಕರಾವಳಿಗೂ ನಂಟು ವ್ಯಾಪಿಸುತ್ತಿದೆ. ಪ್ರಥ್ವಿ ಶೆಟ್ಟಿ ಕರಾವಳಿಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ನೇರವಾಗಿ ಡ್ರಗ್ಸ್ ಸಪ್ಲೈ ಮಾಡಿದ್ದಾಳಾ. ಇಲ್ಲಾ ತನ್ನ ಸ್ನೇಹಿತರ ಜೊತೆಗೆ ಸಪ್ಲೈ ಮಾಡಿದ್ದಾಳಾ ಅನ್ನೋ ಕುರಿತು ಸಿಸಿಬಿ ವಿಚಾರಣೆ ನಡೆಸಬೇಕಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಮಂಗಳೂರು, ಮಣಿಪಾಲ, ಉಡುಪಿ ಸೇರಿದಂತೆ ಕರಾವಳಿ ಭಾಗದ ಪ್ರತಿಷ್ಠಿತ ಹೋಟೆಲ್, ಪಬ್ ಗಳಲ್ಲಿ ನಡೆಯುತ್ತಿರುವ ಪಾರ್ಟಿಗಳ ಬಗ್ಗೆಯೇ ಇದೀಗ ಸಂಶಯ ಮೂಡುವುದಕ್ಕೆ ಶುರುವಾಗಿದೆ. ಒಟ್ಟಿನಲ್ಲಿ ಕರಾವಳಿ ಭಾಗಕ್ಕೂ ಡ್ರಗ್ಸ್ ದಂಧೆಯ ನೆರಳು ವ್ಯಾಪಿಸಿರೋದು ಮಾತ್ರ ದುರಂತ.