ಚೆನ್ನೈ: ಯುವಕನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿದ ಕಾಲೇಜು ವಿದ್ಯಾರ್ಥಿನಿ ಹಾಗೂ ಆಕೆಯ ಪಾಲಕರನ್ನು ತರಾಟೆಗೆ ತೆಗೆದುಕೊಂಡ ಚೆನ್ನೈ ನ್ಯಾಯಾಲಯ ಸಂತ್ರಸ್ತ ಯುವಕನಿಗೆ 15 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿದ್ದ ಯುವಕ 7 ವರ್ಷಕ್ಕೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ದ. ಕೊನೆಗೆ ಯುವತಿ ಅತ್ಯಾಚಾರಕ್ಕೆ ಒಳಗಾಗಿಲ್ಲ ಎನ್ನುವುದು ಡಿಎನ್ಎ ಪರೀಕ್ಷೆಯಲ್ಲಿ ಖಚಿತವಾದ ಬಳಿಕ ಯುವಕನಿಗೆ ರೇಪ್ ಕೇಸ್ನಿಂದ ಮುಕ್ತಿ ಸಿಕ್ಕಿದೆ.
ಸಂತ್ರಸ್ತ ಯುವಕನ ಹೆಸರು ಸಂತೋಷ್. ಸುಳ್ಳು ಪ್ರಕರಣದಿಂದ ನನ್ನ ಜೀವನ ಮತ್ತು ವೃತ್ತಿ ಬದುಕು ಹಾಳಾಗಿದೆ. ನನಗೆ ಪರಿಹಾರ ಕೊಡಿಸಿ ಎಂದು ಸಂತೋಷ್ 30 ಲಕ್ಷ ರೂ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ. ಯುವಕನ ಮನವಿಯನ್ನು ಪುರಷ್ಕರಿಸಿದ ಕೋರ್ಟ್ 15 ಲಕ್ಷ ರೂ.ಪರಿಹಾರ ನೀಡುವಂತೆ ಯುವತಿ ಮತ್ತು ಪಾಲಕರಿಗೆ ಆದೇಶಿಸಿದೆ.
ಇನ್ನು ಸಂತೋಷ್ ಲಾಯರ್ ಎ ಸಿರಾಜುದ್ದೀನ್ ಮಾತನಾಡಿ, ಸಂತೋಷ್ ಕುಟುಂಬ ಮತ್ತು ಸುಳ್ಳು ಪ್ರಕರಣ ದಾಖಲಿಸಿದ್ದ ಯುವತಿ ಕುಟುಂಬ ನೆರೆಹೊರೆಯವರು. ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರು. ಇಬ್ಬರ ನಡುವೆ ಮದುವೆ ಒಪ್ಪಂದವು ಸಹ ಆಗಿತ್ತು. ಆದರೆ, ಆಸ್ತಿ ವಿಚಾರವಾಗಿ ಎರಡು ಕುಟುಂಬದ ನಡುವೆ ಭಿನ್ನಾಭಿಪ್ರಾಯ ಮೂಡಿ ಬೇರೆಯಾಗಿದ್ದರು. ಅದಾದ ಬಳಿಕವೇ ಯುವತಿ ಕುಟುಂಬ ಸಂತೋಷ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಹೇಳಿದ್ದಾರೆ.
ಎರಡು ಕುಟುಂಬಗಳು ಚೆನ್ನೈ ಚೆನ್ನೈನ ಸೆಕ್ರೆಟರಿಯಟ್ ಕಾಲನಿಯಲ್ಲಿ ವಾಸವಿದ್ದಾರೆ. ಯುವತಿ ತಂದೆ ಓರ್ವ ಪೊಲೀಸ್ ಇನ್ಸ್ಪೆಕ್ಟರ್. ಇದೀಗ ಸುಳ್ಳು ಪ್ರಕರಣಕ್ಕೆ ಕುಟುಂಬ ಬೆಲೆ ತೆರಬೇಕಾಗಿದೆ.