ಉಡುಪಿ : ಹಿರಿಯಡ್ಕದಲ್ಲಿ ಹಾಡು ಹಗಲಲ್ಲೇ ನಡೆದಿದ್ದ ಉದ್ಯಮಿ ಕಿಶನ್ ಹೆಗ್ಡೆ ಹತ್ಯೆ ಪ್ರಕರಣವನ್ನು ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದು, ಹಣಕಾಸಿನ ವಿಚಾರಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗುತ್ತಿದೆ.

ಕಳೆದೆರಡು ದಿನಗಳ ಹಿಂದೆಯಷ್ಟೇ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಎಂಬವರ ಜೊತೆಗೆ ಕಿಶನ್ ಹೆಗ್ಡೆ ಹಿರಿಯಡ್ಕದ ವೀರ ಭದ್ರಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದು, ಕಾರಿನಿಂದ ಇಳಿದು ದೇವಸ್ಥಾನಕ್ಕೆ ತೆರಳಲುವ ವೇಳೆಯಲ್ಲಿ 7 ರಿಂದ 8 ಮಂದಿ ದುಷ್ಕರ್ಮಿಗಳ ತಂಡ ಕಿಶನ್ ಹೆಗ್ಡೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿತ್ತು. ನಂತರ ಅಲ್ಲಿಂದ ದುಷ್ಕರ್ಮಿಗಳ ತಂಡ ರಿಡ್ಜ್ ಹಾಗೂ ಇನ್ನೋವಾ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಹಿರಿಯಡ್ಕ ಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಕಿಶನ್ ಹೆಗ್ಡೆ ಹಾಗೂ ಕೋಡಿಕೆರೆ ಮನೋಜ್ ನಡುವ ಹಣಕಾಸಿನ ವ್ಯವಹಾರವಿದ್ದು, ಇದೇ ವಿಚಾರಕ್ಕೆ ಹತ್ಯೆ ನಡೆದಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಘಟನೆಯಲ್ಲಿ ಕಿಶನ್ ಹೆಗ್ಡೆ ಜೊತೆಯಲ್ಲಿದ್ದ ಹರಿಪ್ರಸಾದ್ ಶೆಟ್ಟಿ ಎಂಬವರಿಗೂ ಗಂಭೀರ ಗಾಯವಾಗಿತ್ತು.