ಪುತ್ತೂರು : ಹನಿಟ್ರ್ಯಾಪ್ ಗೆ ಒಳಗಾಗಿ ವ್ಯಕ್ತಿಯೋರ್ವ ಬರೋಬ್ಬರಿ 30 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಡ್ನೂರು ಗ್ರಾಮದಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ಯುವತಿಯನ್ನು ಬಂಧಿಸಿದ್ದು, ಉಳಿದ 6 ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಚೀಚಗದ್ದೆ ನಿವಾಸಿ ಅಬ್ದುಲ್ ನಾಸೀರ್ (25 ವರ್ಷ) ಎಂಬವರೇ ಹನಿಟ್ರ್ಯಾಪ್‌ಗೆ ಒಳಗಾದವರು. ಎಪ್ರೀಲ್ 12 ರಂದು ಈ ಘಟನೆ ನಡೆದಿದ್ದು, ಇದೀಗ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ಸೇರಿ 7 ಮಂದಿಯ ವಿರುದ್ದ ದೂರು ದಾಖಲಿಸಿದ್ದಾರೆ.
ಕಾರ್ಕಳದ ನಿವಾಸಿಯೆಂದು ಹೇಳಿಕೊಂಡಿದ್ದ ಯುವತಿ ತನಿಶಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಕೊಟ್ಯಾಡಿ ಯ ಮಹಮ್ಮದ್ ಕುಂಞಿ, ಕೊಟ್ಯಾಡಿಯ ಶಾಫಿ, ಮುಡ್ನೂರು ಚೀಚಗದ್ದೆಯ ನಿವಾಸಿ ಹನೀಫ್ ಯಾನೆ ಕೆಎಂವೈ ಹನೀಫ್, ಸವಣೂರಿನ ಅಝರ್, ಸಯೀದ್ ಮೋನು, ನಾಸಿರ್ ನಾಪತ್ತೆ ಯಾಗಿದ್ದಾರೆ.
ಹನಿಟ್ರ್ಯಾಪ್ ಗೆ ಒಳಗಾಗಿದ್ದ ಯುವಕ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.