ಬೆಂಗಳೂರು : ಬೆಂಗಳೂರಿನ ಭೂಗತ ಲೋಕದಲ್ಲಿ ತನ್ನದೇ ಹೆಸರು ಮಾಡಿದ್ದ ಕುಖ್ಯಾತ ರೌಡಿ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣ ಸಾವನ್ನಪ್ಪಿದ್ದಾನೆ. ಹಲವು ವರ್ಷಗಳ ಕಾಲ ಬೆಂಗಳೂರಿನ ರೌಡಿಸಂ ಆಳಿದ್ದ ಕೊರಂಗು ಹಲವು ಸಮಯಗಳಿಂದಲೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೊರಂಗು ಕೃಷ್ಣ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಭೂಗತಲೋಕವನ್ನು ಆಳುತ್ತಿದ್ದ ಕೊರಂಗು ಕೃಷ್ಣ ವಿರುದ್ದ ನಗರದ ವಿವಿಧ ಠಾಣೆಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಸುಫಾರಿ ಸೇರಿದಂತೆ ಹಲವು ಕೇಸುಗಳು ದಾಖಲಾಗಿದ್ದವು. ದಶಕದ ಹಿಂದೆ ಚಿತ್ರದುರ್ಗದ ಹಿರಿಯೂರಿನ ಡಾಬಾದ ಬಳಿಯಲ್ಲಿ ರೌಡಿ ಹೆಬೆಟ್ಟು ಮಂಜ ಮತ್ತವನ ತಂಡ ಕೊರಂಗು ಮೇಲೆ ಅಟ್ಯಾಕ್ ಮಾಡಿತ್ತು, ಈ ವೇಳೆಯಲ್ಲಿ ಕೊರಂಗು ಕೃಷ್ಣನ ಕೈತುಂಡಾಗಿತ್ತು. ಇದಾದ ನಂತರ ಕೊರಂಗು ಕೃಷ್ಣನನ್ನು ಪೊಲೀಸ್ ಇಲಾಖೆ ರಾಜ್ಯದಿಂದ ಗಡಿಪಾರು ಮಾಡಲಾಗಿತ್ತು. ಹೀಗಾಗಿ ಕೊರಂಗು ಕೃಷ್ಣ ಚಿತ್ತೂರಿನಲ್ಲಿ ಬ್ಯುಸಿನೆಸ್ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ.

ಕೊರಂಗು ಬೆಂಗಳೂರಿನ ಮೊದಲ ಡಾನ್ ಜಯರಾಜ್ ಅತ್ಯಾಪ್ತನಾಗಿದ್ದ, ತಿಮ್ಮೆನಹಳ್ಳಿ ತಮ್ಮಯ್ಯನ ಜೊತೆಯೂ ಗುರುತಿಸಿಕೊಂಡಿದ್ದ. ತಮ್ಮಯನಿಗೆ ಏಕವಚನದಲ್ಲಿ ಬಲರಾಮ ಬೈದಿದ್ದಕ್ಕೆ ಜೈಲಿನಲ್ಲಿ ಮಹಿಳೆ ಮೂಲಕ ಡ್ರಾಗರ್ ಸಪ್ಲೈ ಮಾಡಿಸಿ ಬಲರಾಮನನ್ನು ಕೊಲ್ಲಿಸಿದ್ದು ಇದೇ ಕೊರಂಗು ಕೃಷ್ಣ. ಇದಾದ ನಂತರ ಬಲರಾಮನಶಿಷ್ಯ ಮುಲಾಮ ಕೊರಂಗು ಮೇಲೆಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದ. ಬಲರಾಮನ ಸಮಾಧಿ ಮೇಲೆ ಶಪತ ಮಾಡಿದ್ದ ಮುಲಾಮ ಅಲಿಯಾಸ್ ಲೊಕೇಶ ತನ್ನ ಶಿಷ್ಯ ಹೆಬ್ಬೆಟ್ಟು ಮಂಜನ ಮೂಲಕ ಹಿರಿಯೂರಿನಲ್ಲಿ ಕೊರಂಗು ಮೇಲೆ ಮಂಜ ಅಟ್ಯಾಕ್ ಮಾಡಿದ್ದ. ಈ ಆಟ್ಯಾಕ್ ನಲ್ಲಿ ದೀಪೂ ಎಂಬ ಯುವಕ ಸ್ಥಳದಲ್ಲೇ ಕೊಲೆಯಾಗಿದ್ದ. ಆದರೆ ಅದೃಷ್ಟ ವಶಾತ್ ಕೈ ಕಳೆದು ಕೊಂಡ ಕೊರಂಗು ಬದುಕಿಳಿದಿದ್ದ.ಚಿತ್ತೂರಿನಲ್ಲಿ ಕೊರಂಗುಗಾಗಿ ಅಣ್ಣ ಕಲ್ಲಿದ್ದಲು ಗಣಿ ಮಾಡಿ ಕೊಟ್ಟಿದ್ದ ಎನ್ನಲಾಗಿದೆ. ಇಷ್ಟು ವರ್ಷ ಗಣಿ ವ್ಯವಹಾರ ಮಾಡಿಕೊಂಡಿದ್ದ ಕೊರಂಗು ಕೃಷ್ಣ ಸಾವನ್ನಿದ್ದಾನೆ. ಸ್ಯಾಂಡಲ್ ವುಡ್ ನ ಉಪೇಂದ್ರ ನಟನೆಯ ಓಂ ಸಿನಿಮಾದಲ್ಲಿ ನಟಿಸಿದ್ದ ಕೊರಂಗು ಕೃಷ್ಣ ನಂತರ ರೌಡಿಸಂ ಬಿಡುವುದಾಗಿಯೂ ಮಾತನಾಡಿದ್ದ.

ಅನೇಕ ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರೌಡಿ ಕೊರಂಗು ಕೃಷ್ಣ ಮೃತಪಟ್ಟಿದ್ದಾನೆ. ಸಾವಿರಾರು ಮಂದಿ ಈ ರೌಡಿ ಕೊರಂಗು ಕೃಷ್ಣನಿಂದ ದೌರ್ಜನ್ಯ ಹಲ್ಲೆಗೆ ಒಳಗಾಗಿದ್ರು. ಇಂದು ಕೊರಂಗು ಸಾವಿನಿಂದ ತೊಂದರೆಗೊಳಗಾದವರೆಲ್ಲರೂ ನಿಟ್ಟೂಸಿರು ಬಿಟ್ಟಿದ್ದಾರೆ.