ಮಂಗಳೂರು : ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ 22 ಮಂದಿಗೆ ಸುಪ್ರೀ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

2019 ರ ಡಿಸೆಂಬರ್ 19ರಂದು ಮಂಗಳೂರು ನಗರ ಸ್ಟೇಟ್ ಬ್ಯಾಂಕ್ ಬಳಿಯಲ್ಲಿ ಗುಂಪೊಂದು ಪೌರತ್ವ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆಯಲ್ಲಿ ಪ್ರತಿಭಟನೆ ಹಿಂಸಾಸ್ವರೂಪವನ್ನು ಪಡೆದಿದ್ದು, ಪ್ರತಿಭಟನಾಕಾರರು ಪೊಲೀಸರ ಮೇಲೆ ನಡೆಸಿದ ಕಲ್ಲು ತೂರಾಟದಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು.

ಅಲ್ಲದೇ ಹಿಂಸಾಚಾರದಿಂದ ಮಂಗಳೂರಿನಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದು, 9ಕ್ಕೂ ಅಧಿಕ ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದರು. ಅಲ್ಲದೇ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಹಿಂಸಾಚಾರದ ಕುರಿತು ಸಿಸಿ ಟಿವಿಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಆಧರಿಸಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 13. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿತ್ತು. ಮುಖ್ಯ ಪ್ರಕರಣ ಸೇರಿದಂತೆ ಒಟ್ಟು ಮೂರು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರಿನ 2ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ನಾಲ್ಕು ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಇದೀಗ 22 ಮಂದಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.