ಮಂಗಳೂರು : ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಇದೀಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ವೈದ್ಯರ ಮೇಲೆ ಕೇಳಿಬಂದಿದೆ.
ಮಂಗಳೂರು ನಗರದ ಯೆಯ್ಯಾಡಿಯ ವಸಂತಿ ಎಂಬವರೇ ಹಲ್ಲೆಗೊಳಗಾಗಿರುವ ಮಹಿಳೆ ಎಂದು ತಿಳಿದುಬಂದಿದೆ. ಅಪೆಂಡಿಕ್ಸ್ ಹಿನ್ನೆಲೆಯಲ್ಲಿ ವಂಸತಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ ಬಳಿಕ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಮಕ್ಕಳು ಆಸ್ಪತ್ರೆಗೆ ಕರೆತಂದು ವೈದ್ಯರ ಬಳಿಯಲ್ಲಿ ತೋರಿಸಿದ್ದಾರೆ.
ಆಪರೇಷನ್ ಮಾಡಿದ್ದ ವೈದ್ಯರು ಡ್ಯೂಟಿಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಅಲ್ಲಿಯೇ ಇದ್ದ ವೈದ್ಯರೋರ್ವರು ಊಟ ಮಾಡಲು ಕಷ್ಟವಾಗೋದಾದ್ರೆ ಟ್ಯೂಬ್ ಮೂಲಕ ಜ್ಯೂಸ್ ನೀಡಿ ಎಂದಿದ್ದಾರೆ. ಅಲ್ಲದೇ ಮಹಿಳೆಯ ಬಾಯಿಗೆ ಟ್ಯೂಬ್ ಹಾಕಿದ್ದಾರೆ. ಆದರೆ ಮಹಿಳೆ ಟ್ಯೂಬ್ ಅಳವಡಿಕೆಗೆ ವಿರೋಧ ಮಾಡುತ್ತಿದ್ದಂತೆಯೇ ವೈದ್ಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ಬೆನ್ನಲ್ಲೇ ವೈದ್ಯರು ಮಹಿಳೆಯಲ್ಲಿ ಕ್ಷಮೆಯಾಚನೆ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯ ಕಡೆಯವರು ದೂರು ನೀಡಿರಲಿಲ್ಲ. ಇದೀಗ ವೈದ್ಯರ ಅಮಾನವೀಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.