ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಹಾಗೂ ಅದನ್ನು ಆಪ್ ಗಳ ಮೂಲಕ ಬಿತ್ತರಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ರಾಜ್ ಕುಂದ್ರಾ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ರಾಜ್ ಕುಂದ್ರಾ, ಅವರ ಮ್ಯಾನೇಜರ್ ಉಮೇಶ್ ಕಾಮತ್ ಸೇರಿದಂತೆ ಒಟ್ಟು ಪ್ರಕರಣದ 10 ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಅಶ್ಲೀಲ ಚಿತ್ರಗಳ ತಯಾರಿಕೆ ಹಾಗೂ ಅವುಗಳನ್ನು ಆಪ್ ಗಳ ಮೂಲಕ ಬಿತ್ತರಿಸಿದ ಆರೋಪದ ಮೇಲೆ ರಾಜ್ ಕುಂದ್ರಾ ಮೇಲೆ 2021 ರ ಫೆಬ್ರವರಿಯಲ್ಲೇ ದೂರು ದಾಖಲಾಗಿತ್ತು.ಈ ಹಿನ್ನೆಲೆಯಲ್ಲಿ ಜುಲೈ 19 ರಂದು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ರಾಜ್ ಕುಂದ್ರಾ ಬಂಧಿಸಿದ್ದರು.

ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಚಿತ್ರಗಳ ತಯಾರಿಕೆ, ಪ್ರಸಾರಕ್ಕೆ ಸಂಬಂಧಿಸಿದ ಹಲವು ಸಾಕ್ಷಿಗಳಿದ್ದು, ಪ್ರಕರಣದಲ್ಲಿ ಅವರೇ ಪ್ರಮುಖ ಆರೋಪಿ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಹೀಗಾಗಿ ರಾಜ್ ಕುಂದ್ರಾ ಸಂಕಷ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.