ಲಕ್ನೋ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಾಗಿ ಹೃದಯಾಘಾತಕ್ಕೆ (Newly married couple die) ಬಲಿಯಾಗುತ್ತಿದ್ದಾರೆ. ಅಂತೆಯೇ ಮದುವೆಯ ಮೊದಲ ರಾತ್ರಿಯೇ ನವದಂಪತಿ ಹೃದಯಾಘಾತದಿಂದ ಸಾವನ್ನಪ್ಪಿರುವ ದುರಂತ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಪ್ರತಾಪ್ ಯಾದವ್ (22 ವರ್ಷ), ಪುಷ್ಪಾ ( 20 ವರ್ಷ) ಮೃತ ಯುವ ದಂಪತಿಯಾಗಿದ್ದಾರೆ. ಪ್ರತಾಪ್ ಹಾಗೂ ಪುಷ್ಪಾ ಅವರ ಇತ್ತೀಚಿಗೆ ನಡೆದಿತ್ತು. ಮದುವೆಯ ರಾತ್ರಿ ನವಜೋಡಿ ಕನಸುಗಳನ್ನು ಹೊತ್ತು ತಮ್ಮ ಕೋಣೆಯನ್ನು ಪ್ರವೇಶಿಸಿದ್ದಾರೆ. ಮರುದಿನ ಬೆಳಗ್ಗೆ ಜೋಡಿ ಕೋಣೆಯ ಬಾಗಿಲು ತೆರೆಯದೇ ಇದ್ದಾಗ, ಅನುಮಾನಗೊಂಡು ಮನೆಯವರು ಪರಿಶೀಲಿಸಿದ ವೇಳೆಯಲ್ಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಕಾರ್ಯವನ್ನು ನಡೆಸಿದ್ದಾರೆ. ಸುದ್ದಿ ತಿಳಿದು ಸಾವಿರಾರು ಜನರು ಗ್ರಾಮಕ್ಕೆ ಆಗಮಿಸಿದ್ದರು.
ದಂಪತಿಗಳಿಗೆ ಯಾವುದೇ ಹೃದಯ ಸಂಬಂಧಿ ಸಮಸ್ಯೆ ಇರಲಿಲ್ಲ ಅನ್ನೋದು ದೃಢಪಟ್ಟಿದೆ. ಕೋಣೆಯಲ್ಲಿ ಸರಿಯಾಗಿ ಗಾಳಿ ಇಲ್ಲದ ಹಿನ್ನೆಲೆಯಲ್ಲಿ ಉಸಿರುಗಟ್ಟಿ ನಂತರ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ದಂಪತಿಗಳ ಸಾವಿನ ಹಿಂದಿನ ರಹಸ್ಯವನ್ನು ಭೇದಿಸಲು ಲಕ್ನೋದ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಹೆಚ್ಚಿನ ತನಿಖೆಗಾಗಿ ಎರಡೂ ದೇಹಗಳ ಒಳಾಂಗಗಳನ್ನು ಸಂರಕ್ಷಿಸಲಾಗಿದೆ ಎಂದು ಬಲರಾಂಪುರ್ ಎಸ್ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಮೊದಲ ರಾತ್ರಿಗೆ ದಂಪತಿ ಮಲಗಿದ್ದ ಕೋಣೆಯ ಒಳಗೆ ಯಾರೂ ಬಲವಂತವಾಗಿ ಪ್ರವೇಶ ಮಾಡಿರುವ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಯುವ ದಂಪತಿಯ ಒಂದೆರಡು ದಿನಗಳ ಹಿಂದಿನ ದಿನಚರಿಯನ್ನು ತಾಳೆ ಹಾಕಲಾಗುತ್ತಿದೆ. ದಂಪತಿ ಸಾವಿಗೂ ಮೊದಲ ದಿನ ಯಾವ ಆಹಾರವನ್ನು ಸೇವಿಸಿದ್ದಾರೆ ಅನ್ನೋ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೇ ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸುವ ಸಾಧ್ಯತೆಯಿದೆ. ವಿಧಿವಿಜ್ಞಾನ ತಜ್ಞರ ತಂಡವು ಅವರ ಸಾವಿನ ಹಿಂದಿನ ಕಾರಣವನ್ನು ಕಂಡುಹಿಡಿಯಲು ಕೊಠಡಿ ಮತ್ತು ಸಂದರ್ಭಗಳನ್ನು ಪರಿಶೀಲಿಸುತ್ತಿದೆ, ಎಂದು ಇನ್‌ಸ್ಪೆಕ್ಟರ್ ಕೈಸರ್‌ಗಂಜ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿದೆ ಹೃದಯಾಘಾತ ಪ್ರಕರಣ
ಭಾರತದಲ್ಲಿ ಕಳೆದ ಕೆಲವು ದಶಕಗಳಿಂದಲೂ ಹೃದಯಾಘಾತ ಸಾಮಾನ್ಯವಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಹೃದಯರಕ್ತನಾಳದ ಕಾಯಿಲೆ (CVD), ಕ್ಯಾನ್ಸರ್ ಅನ್ನು ಮೀರಿಸುತ್ತದೆ. ವಿಶ್ವದಾದ್ಯಂತ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಭಾರತದಲ್ಲಿಯೂ ಏರಿಕೆಯಾಗುತ್ತಿದೆ. 2030 ರ ವೇಳೆಗೆ ಪ್ರತೀ ನಾಲ್ಕು ಸಾವಿಗೆ ಒಂದು ಹೃದಯ ಸಂಬಂಧಿಸಿದ್ದಾಗಿರಲಿದೆ ಅಂತಾ ತಜ್ಞರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ.ಯುವ ಮತ್ತು ಮಧ್ಯವಯಸ್ಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೃಹಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.
Newly married couple die : Newly married couple die heart attack at wedding night Luknow