ಒಡಿಶಾ : ಆ ತಾಯಿ ಮಗ ಕಳ್ಳತನವೊಂದಕ್ಕೆ ಸಾಕ್ಷಿಯಾಗಿದ್ದರು. ಸಾಕ್ಷಿ ಹೇಳಿದ್ರೆ ನಾವೆಲ್ಲಿ ಸಿಕ್ಕಿ ಬೀಳ್ತೇವೋ ಅಂತಾ ತಿಳಿದ ಕಳ್ಳರು ಮಾಡಿದ್ದು ಮಾತ್ರ ಅಮಾನವೀಯ ಕೃತ್ಯ. ರಾತ್ರಿ ಆ ತಾಯಿ ಮಗ ಮಲಗಿದ್ದಾಗ ಬಂದ ಕಳ್ಳರು ಅವರಿಬ್ಬರನ್ನೂ ಜೀವಂತವಾಗಿ ಸುಟ್ಟು ಹಾಕಿದ್ದಾರೆ.

ಈ ಘಟನೆ ನಡೆದಿರೋ ಒಡಿಶಾದ ಕಿಯೋಂಝರ್ ಜಿಲ್ಲೆಯ ಕಲಿಗಾಂವ್ ಗ್ರಾಮದಲ್ಲಿ. ಜಂಜಲಿ ಜೆನಾ (70) ಮತ್ತು ಅವರ ಮಗ ಬನಮಾಲಿ ಜೆನಾ (45) ಎಂಬವರೇ ಸಾವನ್ನಪ್ಪಿದ ತಾಯಿ ಮಗ. ಆ ವೃದ್ದ ತಾಯಿ ಮಗನಿಗೆ ಉಳಿದುಕೊಳ್ಳುವುದಕ್ಕೆ ಮನೆಯಿರಲಿಲ್ಲ. ಹೀಗಾಗಿ ಖಾಲಿಯಿದ್ದ ಅಂಗನವಾಡಿ ಕೇಂದ್ರದಲ್ಲಿ ವಾಸವಾಗಿದ್ದರು.

ಇವರು ವಾಸವಿದ್ದ ಸ್ಥಳದ ಪಕ್ಕದಲ್ಲಿದ್ದ ಅಂಗಡಿಯೊಂದರಲ್ಲಿ ಕಳ್ಳತನ ನಡೆದಿತ್ತು. ಆ ಕಳ್ಳತನವನ್ನು ತಾಯಿ ಮಗ ಕಣ್ಣಾರೆ ಕಂಡಿದ್ದರು. ಎಲ್ಲಿನ ನಾವು ಕಳವು ಮಾಡಿರೋದು ಬಯಲಾಗುತ್ತೆ ಅನ್ನೋ ಭಯ ಕಳ್ಳರನ್ನು ಕಾಡುವುದಕ್ಕೆ ಶುರುವಾಗಿತ್ತು. ಹೀಗಾಗಿಯೇ ಕಳ್ಳರು ಅವರಿಬ್ಬರನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾರೆ.

ಆವತ್ತೂ ಕೂಡ ತಾಯಿ ಮಗ ಊಟ ಮಾಡಿ ಅಂಗನವಾಡಿ ಕೇಂದ್ರದಲ್ಲಿ ಮಲಗಿದ್ದಾರೆ. ಈ ವೇಳೆಯಲ್ಲಿ ಅಲ್ಲಿಗೆ ಬಂದ ಕಳ್ಳರ ತಂಡ ಅಂಗನವಾಡಿ ಕೇಂದ್ರದ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದಾರೆ. ನಂತರ ಕಟ್ಟಡಕ್ಕೆ ಬೆಂಕಿ ಕೊಟ್ಟು ಇಬ್ಬರನ್ನು ಹತ್ಯೆ ಮಾಡಿದ್ದರು. ಕೊನಂದಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.