ಮಧ್ಯಪ್ರದೇಶ: Ragging case: ಯಾವುದೋ ಒಂದು ಕೇಸ್ ನ್ನು ಭೇದಿಸಲು ಪೊಲೀಸ್ ಪಾತ್ರದಲ್ಲಿರುವ ಹೀರೋಗಳು ಕಾಲೇಜಿಗೆ ಸ್ಟೂಡೆಂಟ್ ಆಗಿ ಮಾರುವೇಷದಲ್ಲಿ ಹೋಗೋದು. ಪ್ರತಿನಿತ್ಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸಿ ಆರೋಪಿಗಳ ಪತ್ತೆಹಚ್ಚುವ ಕೆಲಸ ಮಾಡೋದು ಇಂಥ ಕಥಾಹಂದರವನ್ನು ಹೊಂದಿರುವ ಅದೆಷ್ಟೋ ಸಿನಿಮಾಗಳು ಬಂದಿವೆ. ಆದರೆ ಮಧ್ಯಪ್ರದೇಶದಲ್ಲಿ ಹೀಗಿದ್ದೇ ಒಂದು ನೈಜಘಟನೆ ನಡೆದಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
24 ವರ್ಷದ ಪೊಲೀಸ್ ಕಾನ್ ಸ್ಟೇಬಲ್ ಶಾಲಿನಿ ಚೌಹಾಣ್ ಎಂಬುವವರು ರ್ಯಾಗಿಂಗ್ ಪ್ರಕರಣ ಭೇದಿಸಲು ದೊಡ್ಡ ಸಾಹಸವನ್ನೇ ಮಾಡಿ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿನಿಯಾಗಿ ಕಾಲೇಜಿಗೆ ಸೇರಿಕೊಂಡು 6 ತಿಂಗಳ ಹಿಂದಿನ ರ್ಯಾಗಿಂಗ್ ಕೇಸ್ ಭೇದಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂಧೋರ್ ನಲ್ಲಿರುವ ಮಹಾತ್ಮಾಗಾಂಧಿ ಸ್ಮಾರಕ (ಎಂಜಿಎಂ) ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ.
ಇದನ್ನೂ ಓದಿ: Boy suicide case: ಮಹಿಳೆಯರ ಒಳಉಡುಪು ಧರಿಸಿದ್ದ ಬಾಲಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
2022ರ ಜುಲೈ 24ರಂದು ಮಹಾತ್ಮಾಗಾಂಧಿ ಸ್ಮಾರಕ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ‘ತಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಮಿತಿಮೀರಿದೆ. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿನಿಗಳ ಮೇಲೆ ಸೀನಿಯರ್ಸ್ ರ್ಯಾಗಿಂಗ್ ಮಾಡುತ್ತಿದ್ದಾರೆ. ಅಶ್ಲೀಲವಾಗಿ ವರ್ತಿಸುವಂತೆ ಪೀಡಿಸುತ್ತಿದ್ದಾರೆ. ಇದನ್ನು ತಡೆಗಟ್ಟುವಂತೆ ಕೋರಿ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಸಹಾಯವಾಣಿಗೆ ದೂರು ನೀಡಿದ್ದರು. ಜೊತೆಗೆ ಜೂನಿಯರ್ಸ್ ಗೆ ಸೀನಿಯರ್ಸ್ ಕಳಿಸಿದಂಥ ವಾಟ್ಸಪ್ ನ ಕೆಲ ಅಶ್ಲೀಲ ಸಂದೇಶಗಳನ್ನು ಸ್ಕ್ರೀನ್ ಶಾಟ್ ಸಹಿತ ಪುರಾವೆ ನೀಡಿದ್ದರು. ಆದರೆ ವಿದ್ಯಾರ್ಥಿನಿ ಮಾತ್ರ ತನ್ನ ಹೆಸರನ್ನೂ ಹಾಗೂ ಆರೋಪಿಗಳ ಹೆಸರನ್ನೂ ಗೌಪ್ಯವಾಗಿಟ್ಟಿದ್ದರು. ಅದೇ ದೂರಿನ ಪ್ರತಿಯನ್ನು ಯುಜಿಸಿ ಪೊಲೀಸರಿಗೆ ನೀಡಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಿಡಿಗೇಡಿ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಕೆಲ ತಂತ್ರ ರೂಪಿಸಿದ್ದು, ಅದು ವಿಫಲವಾಯ್ತು. ಹೀಗಾಗಿ ಅವರು ಪೊಲೀಸ್ ಕಾನ್ ಸ್ಟೇಬಲ್ ಶಾಲಿನಿ ಚೌಹಾಣ್ ಅವರನ್ನು ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಅಡ್ಮಿಶನ್ ಮಾಡಿಸಿದ್ರು. ಮೇಲಾಧಿಕಾರಿಗಳ ಸೂಚನೆಯಂತೆಯೇ ಶಾಲಿನಿ ಚೌಹಾಣ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯಂತೆಯೇ ಇದ್ದು, ಯಾರಿಗೂ ಅನುಮಾನ ಬರದಂತೆ ಎಲ್ಲರ ಜೊತೆಗೆ ಆಪ್ತವಾದರು. ಕ್ಯಾಂಟೀನ್ ನಲ್ಲಿ ಗಂಟೆಗಟ್ಟಲೇ ಕುಳಿತು ವಿದ್ಯಾರ್ಥಿಗಳ ಚಲನವಲನಗಳನ್ನು ಗಮನಿಸಿದರು. ಹೀಗೆ ಕೆಲ ದಿನಗಳಲ್ಲೇ ರ್ಯಾಗಿಂಗ್ ಕೇಸ್ ಭೇದಿಸಿದ ಲೇಡಿ ಕಾನ್ ಸ್ಟೇಬಲ್ 11 ವಿದ್ಯಾರ್ಥಿಗಳನ್ನು ಪತ್ತೆಹಚ್ಚಿದ್ದಾರೆ. ಈ ಪೈಕಿ 9 ವಿದ್ಯಾರ್ಥಿಗಳು ಮಧ್ಯಪ್ರದೇಶದವರಾಗಿದ್ದು, ಓರ್ವ ಪಶ್ಚಿಮ ಬಂಗಾಳ ಹಾಗೂ ಇನ್ನೋರ್ವ ಬಿಹಾರದವನು ಎಂದು ತಿಳಿದುಬಂದಿದೆ. ಸದ್ಯ ಈ ಎಲ್ಲಾ ವಿದ್ಯಾಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
Ragging case: Lady constable who entered the college as a student to crack the ragging case What happened next