ಮುಂಬೈ : ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸಾಕಷ್ಟು ಅನುಮಾನಗಳು ವ್ಯಕ್ತವಾಗಿತ್ತು. ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರೂ ಕೂಡ ಅದೊಂದು ಕೊಲೆ ಅಂತಾ ಸಂಬಂಧಿಕರು ಆರೋಪಿಸಿದ್ದರು. ಆದ್ರೀಗ ನಟನ ಮರಣೋತ್ತರ ಪರೀಕ್ಷಾ ವರದಿ ಹೊರಬಿದ್ದಿದ್ದು, ಸಾವಿನ ಸತ್ಯಾಂಶ ಬಯಲಾಗಿದೆ.

ರೀಲ್ ಮೇಲೆ ಮಹೇಂದ್ರ ಸಿಂಗ್ ಧೋನಿಯ ಜೀವನ ಚರಿತ್ರೆಯನ್ನೇ ಬಿಚ್ಚಿಟ್ಟಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಒಂದು ದಿನ ಕಳೆದು ಹೋಗಿದೆ. 34ನೇ ವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ಪಯಣಿಸಿದ್ದ ನಾಯಕನಿಗಾಗಿ ಬಾಲಿವುಡ್ ದಿಗ್ಗಜರು, ಕ್ರಿಕೆಟ್ ಆಟಗಾರರು, ಅಭಿಮಾನಿಗಳು ಕಂಬನಿ ಮಿಡಿದಿದ್ದರು.

ಈ ನಡುವಲ್ಲೇ ಸಾವಿನ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ ಹೊತ್ತಲ್ಲೇ ಮನೆಯಲ್ಲಿ 4 ಮಂದಿಯಿದ್ದಿದ್ದರು ಅನ್ನುವ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಟನ ಮರಣೋತ್ತರ ಪರೀಕ್ಷಾ ವರದಿಯ ಕುತೂಹಲವನ್ನು ಮೂಡಿಸಿತ್ತು.

ಅಲ್ಲದೇ ತಾಯಿ ಸಾವು, ಪ್ರೇಯಸಿಯ ನಿಶ್ಚಿತಾರ್ಥ, ಮಾಜಿ ಮ್ಯಾನೇಜರ್ ಆತ್ಮಹತ್ಯೆಯಿಂದಾಗಿ ಸುಶಾಂತ್ ಸಿಂಗ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದಲೇ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಅಂತಾನೂ ಹೇಳಲಾಗಿತ್ತು. ಇದೆಲ್ಲದರ ನಡುವಲ್ಲೇ ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಪರೀಕ್ಷಾ ವರದಿ ಹೊರಬಿದ್ದಿದೆ.

ಸುಶಾಂತ್ ಸಿಂಗ್ ರಜಪೂತ್ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಮರಣೋತ್ತರ ಪರೀಕ್ಷೆಯ ಪ್ರಥಮ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಸುಶಾಂತ್ ಸಿಂಗ್ ಅವರದ್ದು ಕೊಲೆಯಲ್ಲ ಆತ್ಮಹತ್ಯೆ ಅನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಆದರೆ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬರುವವರೆಗೂ ಯಾವುದಕ್ಕೂ ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೇ ಸುಶಾಂತ್ ಸಿಂಗ್ ಅವರ ಕೆಲವು ಅಂಗಾಂಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅದರ ವರದಿಯನ್ನೂ ಪೊಲೀಸರು ಕಾಯುತ್ತಿದ್ದಾರೆ. ಒಂದೊಮ್ಮೆ ಸುಶಾಂತ್ ಸಿಂಗ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದೇ ಆಗಿದ್ರೆ, ಯಾವ ಕಾರಣಕ್ಕೆ ಮಾಡಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಅವರಿಗೆ ಯಾರಿಂದಾದ್ರೂ ಒತ್ತಡ ಇದೆಯಾ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.