ಚಿಕ್ಕಮಗಳೂರು : ಆ ಗ್ರಾಮದಲ್ಲಿ ಕತ್ತಲಾದ್ರೆ ಸಾಕು ಆ ಮನೆಯ ಮೇಲೆ ಕಲ್ಲು ಬೀಳೋದಕ್ಕೆ ಶುರುವಾಗುತ್ತೆ. ರಾತ್ರಿ ಹೊತ್ತಲ್ಲಿ ಕಲ್ಲು ಬೀಳುವುದರಿಂದ ಆ ಮನೆಯ ಜನ ಮಾತ್ರವಲ್ಲ ಊರವರೇ ಭಯಭೀತರಾಗಿದ್ದರು. ಆದ್ರೆ ಪ್ರಕರಣದ ಬೆನ್ನು ಬಿದ್ದ ಪೊಲೀಸರೂ ಕೂಡ ಶಾಕ್ ಆಗಿದ್ದಾರೆ.

ಅಷ್ಟಕ್ಕೂ ಈ ಘಟನೆ ನಡೆದಿರೋದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ. ಕಳೆದೆರಡು ದಿನಗಳಿಂದಲೂ ಈ ಹೊನ್ನವಳ್ಳಿ ಗ್ರಾಮದಲ್ಲಿ ಕತ್ತಲಾದ್ರೆ ಸಾಕು ಗ್ರಾಮದ ರಾಘವೇಂದ್ರ ಶೆಟ್ಟಿ ಎಂಬವರ ಮನೆ ಮೇಲೆ ಏಕಾಏಕಿಯಾಗಿ ಕಲ್ಲುಗಳು ಬಂದು ಬೀಳೋದಕ್ಕೆ ಶುರುವಾಗ್ತಿತ್ತು. ಎರಡು ದಿನಗಳ ಕಾಲ ನಡೆದ ಘಟನೆಯಿಂದಾಗಿ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ಯಾವುದೋ ದುಷ್ಟ ಶಕ್ತಿಯ ಕೃತ್ಯ ಅಂತಾ ಊರವರೆಲ್ಲಾ ಮಾತನಾಡಿಕೊಳ್ಳೋದಕ್ಕೆ ಶುರುಮಾಡಿದ್ದರು. ಕೊನೆಗೆ ಮನೆ ಮಾಲೀಕ ಶೃಂಗೇರಿ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ಜಾಡು ಹಿಡಿದ ಪೊಲೀಸರು ಇದೆಲ್ಲಾ ಅಪ್ರಾಪ್ತ ಬಾಲಕನೋರ್ವನ ಕೃತ್ಯ ಅನ್ನೋದನ್ನು ಬಯಲು ಮಾಡಿದ್ದಾರೆ. ಕಲ್ಲು ತೂರಾಟ ಮಾಡಿರೋ ಬಾಲಕನ್ನು ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.