ಮಂಡ್ಯ : ಮೈಸೂರು – ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಇಂಡಿಕಾ ಕಾರು ಹಾಗೂ ಮರಗಳನ್ನು ತುಂಬಿದ್ದ ಲಾರಿಯ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಚಿನಕುರಳಿ ಹೋಬಳಿಯ ಸಣಬ ಗ್ರಾಮದ ಸಂತೋಶ್ (23 ವರ್ಷ) ಸಾವನ್ನಪ್ಪಿದ ದುರ್ದೈವಿ. ಕಾರಿನಲ್ಲಿದ್ದ ಅಶೋಕ್ ಎಂಬವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ತಡರಾತ್ರಿ ರಾಜ್ಯ ಹೆದ್ದಾರಿಯಲ್ಲಿರುವ ಪ್ರೀತಂ ರೆಸ್ಟೋರೆಂಟ್ ಬಳಿ ಕಾರು ಬರುತ್ತಿದ್ದಂತೆಯೇ ಒಮ್ಮಿಂದೊಮ್ಮೆಲೆ ಸುರಗಿ ಮರಗಳನ್ನು ಹೊತ್ತು ತಂದಿದ್ದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದೆ.

ಈ ಕುರಿತು ಕೃಷ್ಣರಾಜಪೇಟೆ ಪಟ್ಟಣ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧರಾಜುವನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.