ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ ನನ್ನು ಮಂಗಳೂರು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಅಲ್ಲದೇ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಪೊಲೀಸರು ಇಷ್ಟು ದಿನಗಳ ಕಾಲ ವಶಕ್ಕೆ ಕೇಳೋ ಸಾಧ್ಯತೆಯಿದ್ದು, ವಿಚಾರಣೆಯ ವೇಳೆಯಲ್ಲಿ ಬಾಂಬರ್ ಆದಿತ್ಯರಾವ್ ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ದೇಶದಾದ್ಯಂತ ಆತಂಕಕ್ಕೆ ಕಾರಣವಾಗಿದ್ದ ಆದಿತ್ಯ ರಾವ್ ನಿನ್ನೆ ಬೆಂಗಳೂರಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಎಸಿಪಿ ಬೆಳ್ಳಿಯಪ್ಪ ನೇತೃತ್ವದ ಪೊಲೀಸರ ತಂಡ ಮಂಗಳೂರು ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ವಿಮಾನದ ಮೂಲಕ ಮಂಗಳೂರಿಗೆ ಕರೆತಂದಿದ್ದರು. ವಿಮಾನ ನಿಲ್ದಾಣದಿಂದ ನೇರವಾಗಿ ಪಣಂಬೂರಿನಲ್ಲಿರೋ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಆದಿತ್ಯ ರಾವ್ ನನ್ನು ಕರೆದೊಯ್ದ ಪೊಲೀಸರು, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಅವರ ನೇತೃತ್ವದಲ್ಲಿ ತಡರಾತ್ರಿಯವರೆಗೂ ವಿಚಾರಣೆಯನ್ನು ನಡೆಸಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರೋದಕ್ಕೆ ನಿಖರವಾದ ಕಾರಣ. ಬಾಂಬ್ ತಯಾರಿಕೆಯಲ್ಲಿ ಯಾರೆಲ್ಲಾ ಸಹಾಯ ಮಾಡಿದ್ದಾರೆ. ಕೇವಲ ಕೆಲಸ ಸಿಗಲಿಲ್ಲಾ ಅನ್ನೋ ಕಾರಣಕ್ಕೆ ಆತ ಬಾಂಬ್ ಇರಿಸಿದ್ದನಾ. ಇಲ್ಲಾ ಉದ್ದೇಶಪೂರ್ವಕವಾಗಿಯೇ ಆತ ದುಷ್ಕೃತ್ಯಕ್ಕೆ ಮುಂದಾಗಿದ್ದನಾ. ಯಾವುದಾದ್ರೂ ಉಗ್ರ ಸಂಘಟನೆಗಳ ಜೊತೆಗೆ ಆದಿತ್ಯ ರಾವ್ ಗೆ ಸಂಪರ್ಕವಿತ್ತಾ ಅನ್ನೋ ಕುರಿತು ಪೊಲೀಸರು ವಿಚಾರಣೆಯನ್ನು ನಡೆಸಿದ್ದಾರೆ. ಆದಿತ್ಯ ರಾವ್ ವಿಮಾನ ನಿಲ್ದಾಣವಲ್ಲದೇ ಇತರ ಕಡೆಗಳಲ್ಲಿಯೂ ವಿದ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಿದ್ದನಾ ಅನ್ನೋ ಬಗ್ಗೆಯೂ ಸ್ಪೋಟಕ ಮಾಹಿತಿಗಳನ್ನು ಆರೋಪಿ ಬಾಯ್ಬಿಟ್ಟಿದ್ದಾನೆ. ಇಂದು ನ್ಯಾಯಾಲಯಕ್ಕೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರೋ ಪೊಲೀಸರು ಇನ್ನಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳೋ ಸಾಧ್ಯತೆಯಿದೆ.